ಶಿರಸಿ: ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಇದರ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ಕೆನರಾ ಬ್ಯಾಂಕ್ ಇದರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ (CSR Fund) ಯ ಅಡಿಯಲ್ಲಿ ಅಳವಡಿಸಿರುವ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕದ ಉದ್ಘಾಟನೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಎಕ್ಸ್‌ಪ್ರೆಡಿಕ್ಟ್ ಅವರ ಹೈಡ್ರೆಕ್ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ₹9,75,450/= ಮೌಲ್ಯದ ಚೆಕ್ ವಿತರಿಸಿ ಮಾತನಾಡಿದ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಂಜುನಾಥ್ ಪಂಡಿತ್ ಅವರು ಈ ಗ್ರಾಮೀಣ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡಲು ನಡೆಸಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. 1906ರಲ್ಲಿ ಪ್ರಾರಂಭವಾದ ಕೆನರಾ ಬ್ಯಾಂಕ್ ಇಂದು 2200000 ಕೋಟಿ ರೂಪಾಯಿಗಳಿಗಿಂತ ಅಧಿಕ ವರ‍್ಷಿಕ ವಹಿವಾಟು ಹೊಂದಿ ದೇಶದ ಮೂರನೇ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿ ಬೆಳೆದು ನಿಂತಿದೆ. ತನ್ನ ಗ್ರಾಹಕರಿಗೆ ಹಲವು ರೀತಿಯ ಉಳಿತಾಯ ಹಾಗೂ ಸಾಲದ ಸೌಲಭ್ಯಗಳನ್ನು ಒದಗಿಸುತ್ತಿದೆ. ತನ್ನ ಆರ್ಥಿಕ ವ್ಯವಹಾರದ ಜೊತೆಗೆ ಕೆನರಾ ಬ್ಯಾಂಕ್ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ (ಸಿ.ಎಸ್.ಆರ್.ಫಂಡ್) ಅಡಿಯಲ್ಲಿ ದೇಶದಾದ್ಯಂತ ವಿವಿಧ ಸೇವಾ ಕಾರ‍್ಯಗಳನ್ನು ನಡೆಸುತ್ತಿದೆ. ಬ್ಯಾಂಕಿನ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ಕುಮಟಾದಲ್ಲಿ ಹಾಗೂ ರಾಜ್ಯದ ಹಲವು ಕಡೆ ಯುವಕರಲ್ಲಿ ಉದ್ಯಮಶೀಲತೆ ಬೆಳೆಸಲು ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿ ಕೌಶಲ್ಯ ವರ್ಧನೆಯ ಮಹತ್ಕಾರ‍್ಯ ನಡೆಸಲಾಗುತ್ತಿದೆ. ಪ್ರತಿ ಶಾಲೆಯ 5ರಿಂದ 7ನೇ ತರಗತಿಯ ಹಾಗೂ 8ರಿಂದ 10ನೇ ತರಗತಿಯ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಅನುಕ್ರಮವಾಗಿ ₹2500/= ಹಾಗೂ ₹5000/= ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಿದೆ. ಅದಲ್ಲದೇ, ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಬಹುತೇಕ ಎಲ್ಲ ಗ್ರಾಹಕರನ್ನು ಕೇವಲ ₹20/= ಕಂತಿಗೆ ಅಪಘಾತದಿಂದ ಸಾವು ಹಾಗೂ ಅಂಗವೈಕಲ್ಯಕ್ಕೆ ₹2.00 ಲಕ್ಷದ ವಿಮೆಯ ಮೊತ್ತ ನೀಡುವ
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಸಲಾಗಿದೆ. ಈ ಶಾಲೆಯ ಶಿಕ್ಷಕರ ವೇತನದ ಖಾತೆ ನಮ್ಮ ಬ್ಯಾಂಕಿಗೆ ವರ್ಗಾವಣೆ ಆಗಿರುವುದು ಸಂತಸದ ಸಂಗತಿ. ಇದರಿಂದ ಬ್ಯಾಂಕಿಗಿಂತ ಪ್ರಮುಖವಾಗಿ ಶಿಕ್ಷಕರ ಕುಟುಂಬದವರಿಗೆ ವಿಶೇಷ ಪ್ರಯೋಜನ ದೊರಕುತ್ತದೆ. ಸೇವೆಯ ಅವಧಿಯಲ್ಲಿ ಶಿಕ್ಷಕರು ಮೃತರಾದರೆ ಅವರ ವಾರಸುದಾರರಿಗೆ ಶಿಕ್ಷಕರ ಆ ಸಂದರ್ಭದ ವೇತನದ ಆಧಾರದ ಮೇಲೆ ₹25.00 ಲಕ್ಷದಿಂದ ₹2.00 ಕೋಟಿ ಮೊತ್ತದ ವಿಮೆಯ ರಕ್ಷಣೆ ಸಿಗುತ್ತದೆ.
ಕೆನರಾ ಬ್ಯಾಂಕ್ ಉಳಿದ ಬ್ಯಾಂಕುಗಳಿಗಿಂತ ಹೇಗೆ ವಿಭಿನ್ನ ಎನ್ನುವುದನ್ನು ಉಲ್ಲೇಖಿಸಿ ಈ ಬ್ಯಾಂಕಿಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾನೇಜರ್ ಹಾಗೂ ಕ್ಲರ್ಕ್ ಹುದ್ದೆಗಳಿಗೆ ಸೇರಬೇಕಾದ ಅನಿವರ‍್ಯತೆಯನ್ನು ವಿವರಿಸಿದರು.
ಸಹಾಯಕ ಪ್ರಧಾನ ವ್ಯವಸ್ಥಾಪಕ ನಂದಕಿಶೋರ್ ಕಾಸ್ಕರ್, ಸಿ ಎಸ್ ಆರ್ ನಿಧಿಯನ್ನು ವಿಶೇಷವಾಗಿ ಅವಶ್ಯಕತೆ ಇರುವ ಗ್ರಾಮೀಣ ಶೈಕ್ಷಣಿಕ ಸಂಸ್ಥೆಗಳಿಗೆ ಕೊಡುವ ಪರಿಪಾಠವನ್ನು ಮಂಜುನಾಥ್ ಪಂಡಿತ ಅವರು ಚಾಲನೆಗೆ ತಂದಿರುವುದನ್ನ ಉಲ್ಲೇಖಿಸಿದರು.
ವಿಭಾಗೀಯ ಪ್ರಬಂಧಕ ರಾಹುಲ ಸಾವಂತ,ಮುಖ್ಯ ಪ್ರಬಂಧಕ ಮಹೇಶ ಹೆಗಡೆ, ಹಾಗೂ ಮಹೇಂದ್ರ ಹೆಗಡೆ ಸಭೆಯಲ್ಲಿ ಉಪಸ್ಥಿತರಿದ್ದರು.
ಎಕ್ಸ್‌ಪ್ರೆಡಿಕ್ಟ್ ಆಟೋಮೇಷನ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಬಳಗದ ಬಾಲಚಂದ್ರ ಹೆಗಡೆ, ಶ್ರೀಮತಿ ರೇಖಾ ಹೆಗಡೆ, ಗಜಾನನ ಹೆಗಡೆ ಹಾಗೂ ಡಾ.ವಿಭಾ ಹೆಗಡೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಡಾ.ವಿಭಾ ತಮ್ಮ ತಾಯಿ, ಚಿಕ್ಕಪ್ಪ, ಮೊದಲಾದವರು ಕಲಿತ ಈ ಶಾಲೆಯಲ್ಲಿ ನಮ್ಮ ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ಈ ಘಟಕವನ್ನು ಅಳವಡಿಸಿರುವುದು ಸಂಸ್ಥೆಯ ದೂರದೃಷ್ಟಿಯನ್ನು ಸೂಚಿಸುತ್ತದೆ ಹಾಗೂ ನಮ್ಮನ್ನು ಅಭಿನಂದಿಸಿರುವುದಕ್ಕೆ ಸಾರ್ಥಕ ಭಾವನೆಯನ್ನು ತಂದಿದೆ ಎಂದರು.
ಈ ಸಂದರ್ಭಲ್ಲಿ ಪಾಲ್ಗೊಂಡ ಸಂಸ್ಥೆಯ ವಜ್ರ ಮಹೋತ್ಸವ ಸಮಿತಿಯ ಕಾರ‍್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯೋಪಾಧ್ಯಾಯ ಆರ್.ಎಸ್.ಹೆಗಡೆ ಭೈರುಂಬೆ ಅವರು ನಾವು ತಿನ್ನುವ ಆಹಾರ ಹಾಗೂ ಕುಡಿಯುವ ನೀರು ಹೇಗೆ ಮಾಲಿನ್ಯಕ್ಕೆ ಕಾರಣವಾಗುತ್ತದೆ ಮತ್ತು ಅದನ್ನೇ ಹೇಗೆ ನಮ್ಮ ಆಹಾರ ಉತ್ಪಾದನೆಗೆ ಪೂರಕವಾಗಿ ಬಳಸಿಕೊಳ್ಳಬಹುದು ಎಂದು ವಿವರಿಸಿದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ, ಅವರು ಇಷ್ಟು ದೊಡ್ಡ ಮೊತ್ತದ ಆರ್ಥಿಕ ನೆರವು ನೀಡಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಲು ಅನುವು ಮಾಡಿಕೊಟ್ಟ ಕೆನರಾ ಬ್ಯಾಂಕ್ ಬಳಗಕ್ಕೆ ತುಂಬುಹೃದಯದ ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ‍್ಯಕ್ರಮವನ್ನು ಶಾಲಾ ವಿದ್ಯಾರ್ಥಿನಿಯರ ಮಹಾಗಣಪತಿಯ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಅನಂತ ಭಟ್ ಹುಳಗೋಳ ಅವರು ಸ್ವಾಗತವನ್ನು ಕೋರುತ್ತ ಅನಾವೃಷ್ಟಿಯಿಂದ ಉಂಟಾಗಿರುವ ಜಲಕ್ಷಾಮವನ್ನು ಪರಿಹರಿಸಿಕೊಳ್ಳಲು ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೃಷಿಗೆ ಬಳಸಿಕೊಳ್ಳುವುದು ಅನಿವಾರ‍್ಯ ಎಂದು ಅವರು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕೌಶಲ್ಯ ವೃತ್ತಿ ತರಬೇತಿ ವಿಭಾಗದ ಮಾರ್ಗದರ್ಶಕರಾದ ನಿವೃತ್ತ ಪಶುವೈದ್ಯ ಡಾ. ಗೋಪಾಲ ಹೆಗಡೆ ಹುಳಗೋಳ ನೀರಿನ ಮೂಲಗಳನ್ನು ಉಲ್ಲೇಖಿಸಿ ತ್ಯಾಜ್ಯ ನೀರಿನ ಶುದ್ಧೀಕರಣ ಪ್ರಕ್ರಿಯೆಯ ಅಗತ್ಯವನ್ನು ತಿಳಿಸಿದರು. ನಾರಾಯಣ ಗಡಿಕೈ ಸನ್ಮಾನಿತರನ್ನು ಕುರಿತು ಅಭಿನಂದನಾ ಭಾಷಣ ಮಾಡಿದರು. ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಧ್ಯಾಪಕ ವಸಂತ ಹೆಗಡೆ ಕೃತಜ್ಞತೆ ವ್ಯಕ್ತಪಡಿಸಿದರು.