ಸಿದ್ದಾಪುರ: ರಾಷ್ಟ್ರದ ಆಡಳಿತಕ್ಕೆ ಸಂವಿಧಾನವು ಆಧಾರ. ಹಾಗೆ ಯಕ್ಷಗಾನ ಪ್ರದರ್ಶನಗಳಿಗೆ ಪ್ರಸಂಗ ಕೃತಿಯ ಆಶಯವೇ ಮೂಲ ಆಧಾರ. ಛಂದೋಬದ್ಧವಾಗಿರುವ ಪ್ರಸಂಗ ಕಾವ್ಯವು ಕವಿಯ ದೈತ್ಯ ಪ್ರತಿಭೆಗೆ ಸಾಕ್ಷಿ ಬಿಂದು. ಹೀಗಾಗಿ ಉತ್ತಮ ಪ್ರಸಂಗ ಪಠ್ಯಗಳು ಎಂದಿಗೂ ಸಾವಿರದ ನಿತ್ಯ ನೂತನ ಕಥಾನಕಗಳಾಗಿ ಆಖ್ಯಾನವಾಗಿ ಆಪ್ಯಾಯಮಾನವಾಗುತ್ತವೆ. ಪ್ರಸಂಗಕರ್ತನು ಕಲಾವಿದರ ಪ್ರತಿಭೆಗೆ ನಿಕಷಒಡ್ಡಿ ಕಲಾ ಪ್ರಪಂಚದಲ್ಲಿ ಸದಾ ಅಮರನಾಗುತ್ತಾನೆ ಎಂದು ನಿವೃತ್ತ ಪ್ರಾಚಾರ್ಯ ಯಕ್ಷಗಾನ ವಿಧ್ವಾಂಸ ಲೇಖಕ ಡಾ. ಜಿ.ಎ. ಹೆಗಡೆ ಸೋಂದಾ ನುಡಿದರು.
ಅವರು ಸಿದ್ದಾಪುರ ಹೆಗ್ಗರಣಿಯಲ್ಲಿ ಹಿರಿಯ ಕವಿ ಯಕ್ಷಗಾನ ವಿದ್ವಾಂಸ ಜಿ.ಎಂ.ಭಟ್ ಕೆ.ವಿ. ಬರೆದ “ಹೇರೂರು ಸಿದ್ಧಿವಿನಾಯಕ ಚರಿತ್ರೆ” ಪ್ರಸಂಗದ ಹಸ್ತಪ್ರತಿಯನ್ನು ಮುಖ್ಯ ಅತಿಥಿಯಾಗಿ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿ ಮಾತಾಡುತ್ತಿದ್ದರು. ವಾಜಗಾರಿನ ಕವಿ ಜಿ.ಎಂ. ಭಟ್ಟರು ೪೦ ಕ್ಕೂ ಹೆಚ್ಚಿನ ಪ್ರಸಂಗ ಕೃತಿಗಳನ್ನು ರಚಿಸಿದ್ದು ಅವುಗಳನ್ನೆಲ್ಲ ಪ್ರಕಟಿಸಿ ಯಕ್ಷರಂಗಕ್ಕೆ ನೀಡಬೇಕಾದದ್ದು ಯಕ್ಷಾರಾಧಕ ಸುಮನಸರ ಹೊಣೆಗಾರಿಕೆಯಾಗಿದೆ ಎಂದರು.
ಚತುರ್ದೇವತೆಗಳ ವಾರ್ಷಿಕೋತ್ಸವ ನಿಮಿತ್ತ ರಘುಪತಿ ನಾಯ್ಕ ಹೆಗ್ಗರಣಿ ಅವರ ನೇತೃತ್ವದಲ್ಲಿ, ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯಿಂದ ನಡೆದ “ಲವಕುಶ” ಯಕ್ಷಗಾನ ರಂಗವೇದಿಕೆಯಲ್ಲಿ ನಡೆದ ಈ ಕಾರ್ಯಕ್ರವನ್ನು ಹಿರಿಯ ಸಾಹಿತಿ ಜಿ. ವಿ. ಕೊಪ್ಪಲತೋಟ ಉದ್ಘಾಟಿಸಿ ಕಲೆಯ ಉಳಿವಿಗೆ ಗ್ರಾಮೀಣರ ಪ್ರೋತ್ಸಾಹ ಮತ್ತು ಉತ್ಸಾಹ ಕಾರಣವಾಗಿದೆ ಎಂದರು.
ಪ್ರಸಂಗಕರ್ತ ಹಿರಿಯ ಕವಿ ಜಿ. ಎಂ. ಭಟ್ಟರು ಹಲವು ಪ್ರಸಂಗಗಳನ್ನು ರಚಿಸಿದ ಮೇಲೆ ತಮ್ಮ ಸೀಮೆಯ ಸಿದ್ದಿ ವಿನಾಯಕ ದೇವಸ್ಥಾನದ ಚರಿತ್ರೆಯನ್ನು ಬರೆಯಲು ವಿಶೇಷ ಪ್ರೇರಣೆಯಾಗಿ ಇದನ್ನು ಬರೆದೆ ಎಂದರು. ಮಾಗಿದ ಕಲಾಸಿದ್ದಿಯು ನಿರಂತರ ತಪಸ್ಸಿನ ಫಲವಾಗಿ ಪ್ರಾಪ್ತವಾಗುತ್ತದೆ ಎಂದು ತಮ್ಮ ಅಂತರಂಗವನ್ನು ಬಿಚ್ಚಿಟ್ಟರು.
ಸಾಮಾಜಿಕ ಕಾರ್ಯಕರ್ತ ಗೊರೆಬೈಲ ನಾರಾಯಣ ನಾಯ್ಕ ಹೆಗ್ಗರಣಿ ಗ್ರಾ. ಪಂ. ಸದಸ್ಯ ಅಬ್ದುಲ್ ಬಾರಿ ಹುಸೇನ್ ಸಾಬ್ ಯಕ್ಷಕವಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಕವಿ ಜಿ. ಎಂ. ಭಟ್ಟರಿಗೆ ವಿದ್ವಾಂಸ ಗೌರವ ನೀಡಿ ವಿದ್ಯುಕ್ತವಾಗಿ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹೆಗ್ಗರಣಿ ಸೊಸೈಟಿ ಅಧ್ಯಕ್ಷ ಎಂ. ಎಲ್. ಭಟ್ಟ ಉಂಚಳ್ಳಿ ಮಾತಾಡಿ ಹೆಗ್ಗರಣಿ ಊರನ್ನು ರಘುಪತಿ ನಾಯ್ಕ ಹೆಗ್ಗರಣಿ ಅವರ ಮೇಳದ ಮೂಲಕ ಜಿ. ಎಂ. ಭಟ್ಟ ಅವರ ಸಾಹಿತ್ಯ ಸೇವೆಯ ಮೂಲಕ ಗುರುತಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಎಂದರು. ಕಲೆಯ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಯಕ್ಷಾರಾಧಕ ರಘುಪತಿ ನಾಯ್ಕ ಹೆಗ್ಗರಣಿ ತಮ್ಮ ಮೇಳ ಬೆಳೆದು ಬಂದ ವಿವರ ನೀಡಿ ಯಕ್ಷಾರಾಧಕನಾಗಿ ತನ್ನದು ಒಂದು ಅಳಿಲು ಸೇವೆ ಎಂದರು. ಯಕ್ಷ ಪ್ರಿಯರು, ಕಾರ್ಯಕ್ರಮ ಸಮಿತಿಯ ಸಂಚಾಲಕರು ಆದ ಹೆಗ್ಗರಣಿಯ ರವಿ ಎನ್. ನಾಯ್ಕ ಸ್ವಾಗತಿಸಿದರೆ ಚಿದಂಬರ ನಾಯ್ಕ ಹೆಗ್ಗರಣಿ ಅವರಿಂದ ನಿರ್ವಹಣೆ, ಮಂಜುನಾಥ ನಾಯ್ಕ, ಹೆಗ್ಗರಣಿ ಇವರಿಂದ ವಂದನಾರ್ಪಣೆ ನಡೆದು ಕಾರ್ಯಕ್ರಮ ಸಂಪನ್ನಗೊಂಡಿತು. ದೇವಿ ಪಾರಾಯಣ, ಸಮಾರಾಧನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಲವಕುಶ ಯಕ್ಷಗಾನ ಕಾರ್ಯಕ್ರಮ ನಡೆದು ಗ್ರಾಮೀಣರ ಧಾರ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸಿ ಮುದ ನೀಡಿತು.