Slide
Slide
Slide
previous arrow
next arrow

ಬಾಲಕಿಯರ ವಸತಿನಿಲಯಕ್ಕೆ ಫ್ಯಾನ್ ಅಳವಡಿಸಲು ನ್ಯಾ. ಫಣೀಂದ್ರ ಸೂಚನೆ

300x250 AD

ಕಾರವಾರ: ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು, ಒಂದೇ ಫ್ಯಾನ್ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು ಹೆಚ್ಚುವರಿ ಫ್ಯಾನ್‌ಗಳನ್ನು ಅಳವಡಿಸುವಂತೆ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗೆ ರಾಜ್ಯದ ಉಪ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸೂಚಿಸಿದರು.
ಅವರು ಭಾನುವಾರ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತರು ವಿದ್ಯಾರ್ಥಿಗಳಿಗೆ ಸರಕಾರದ ಆದೇಶದಂತೆ ಎಲ್ಲ ಸೌಲಭ್ಯಗಳು ಕಾಲ ಕಾಲಕ್ಕೆ ದೊರೆಯುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು. ವಸತಿ ನಿಲಯದಲ್ಲಿ ಅಗತ್ಯವಿರುವ ಕೊಠಡಿಗಳಲ್ಲಿ ಹೊಸ ಬೆಡ್ , ಬೆಡ್ ಶೀಟ್ ಮತ್ತು ಬೆಡ್ ಸ್ಪ್ರೆಡ್‌ಗಳನ್ನು ಅಳವಡಿಸುವಂತೆ ಸೂಚನೆ ನೀಡಿದ ಅವರು, ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮತ್ತು ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಿರಂತರವಾಗಿ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸುವುವಂತೆ ಹಾಗು ಕಡ್ಡಾಯವಾಗಿ ಕಂಪ್ಯೂಟರ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ವಸತಿನಿಲಯದಲ್ಲಿ ಮೆನು ಪ್ರಕಾರ ಶುದ್ದ ಮತ್ತು ಪೌಷ್ಠಿಕ ಆಹಾರ ವಿತರಣೆ, ಶುದ್ದ ಕುಡಿಯುವ ನೀರು, ಬಿಸಿ ನಿರು ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳು ನಿರಂತರವಾಗಿ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಉಪ ಲೋಕಾಯುಕ್ತರು ವಸತಿನಿಲಯದಲ್ಲಿ ಸಿದ್ದಪಡಿಸಿದ ಮಧ್ಯಾಹ್ನದ ಆಹಾರವನ್ನು ಪರಶೀಲಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನೀಡುತ್ತಿರುವ ಈ ಎಲ್ಲಾ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಿದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಸರಿಪಡಿಸುವುದಾಗಿ ತಿಳಿಸಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಪ್ರಾಮಾಣಿಕತೆಯಲ್ಲಿ ರೂಡಿಸಿಕೊಳ್ಳಬೇಕು, ಲಂಚ ಪಡೆಯುವುದು ಮತ್ತು ಲಂಚ ನೀಡುವುದು ಎರಡೂ ಅಪರಾಧ ಎಂಬುದನ್ನು ತಿಳಿಯಬೇಕು, ಲಂಚ ನೀಡುವುದಿಲ್ಲ ಮತ್ತು ಪಡೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ವಿದ್ಯಾಭ್ಯಾಸದ ನಂತರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ನಂತರ ಮೆಟ್ರಿಕ್ ಪೂರ್ವಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತರು , ಕೊಠಡಿಯಲ್ಲಿ ಸಾಮರ್ಥ್ಯಕ್ಕೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಒಂದೇ ಫ್ಯಾನ್ ಇರುವುದರಿಂದ ತೊಂದರೆಯಾಗಲಿದೆ ಕೂಡಲೇ ಇಂದು ಸಂಜೆಯೊಳಗೆ ಹೊಸ ಫ್ಯಾನ್ ಗಳನ್ನು ಅಳವಡಿಸಿ ಎಂದು ಸೂಚನೆ ನೀಡಿದರು.
ನಂತರ ಶೇಜವಾಡದ ಅಲ್ಪ ಸಂಖ್ಯಾತರ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು ಈ ಹಾಸ್ಟೆಲ್ ಕಾಮಗಾರಿ ಮುಕ್ತಾಯಗೊಂಡಿದ್ದರೂ ಸಹ ಇದನ್ನು ಆರಂಭಿಸಲು ಸೂಕ್ತ ರಸ್ತೆ ಸಂಪರ್ಕದ ಸಮಸ್ಯೆ ಇರುವ ಬಗ್ಗೆ ಪರಿಶೀಲಿಸಿ, ಈ ಬಗ್ಗೆ ಲೋಕಾಯುಕ್ತದ ಮೂಲಕ ಸರಕಾರಕ್ಕೆ ವರದಿ ಕಳುಹಿಸಿ , ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ವಸತಿ ನಿಲಯದಲ್ಲಿ ಸೂಕ್ತ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್, ಜಿಲ್ಲಾಧಿಕರಿ ಗಂಗೂಬಾಯಿ ಮಾನಕರ, ಜಿ.ಪಂ.ಸಿಇಓ ಈಶ್ವರ ಕಾಂದೂ, ಎಸ್ಪಿ ವಿಷ್ಣುವರ್ಧನ್, ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್, ಚನ್ನಕೇಶವ ರೆಡ್ಡಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಸಮಾಜ ಕಲ್ಯಾಣ, ಹಿಂದುಗಲಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top