ಕಾರವಾರ: ಕರ್ನಾಟಕ ಲೋಕಾಯುಕ್ತ ಕಾಯಿದೆ ಕುರಿತಂತೆ ನ್ಯಾಯಧೀಶರುಗಳು ಮತ್ತು ಜಿಲ್ಲಾ ಹಾಗೂ ತಾಲೂಕು ಕಾನುನು ಸೇವಾ ಪ್ರಾಧಿಕಾರಗಳ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಉತ್ತಮ ಸಾರ್ವಜನಿಕ ಆಡಳಿತ ರೂಪುಗೊಳ್ಳಲು ಸಹಕರಿಸಬೇಕು ಎಂದು ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳಿಗೆ ರಾಜ್ಯದ ಉಪ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು
ಅವರು ರವಿವಾರ ಕಾರವಾರ ನಗರಸಭೆ ಸಭಾಂಗಣದಲ್ಲಿ , ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂ ಘಟಕ ಉತ್ತರಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ, ಉತ್ತಮ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತ ಕಾನುನು ಅರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾನೂನು ಸೇವಾ ಪ್ರಾಧಿಕಾರದ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕರ್ನಾಟಕ ಲೋಕಾಯುಕ್ತದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಅವರಿಗೆ ಉತ್ತಮ ಆಡಳಿತ ವ್ಯವಸ್ಥೆಯ ಪ್ರಯೋಜನಗಳು ದೊರೆಯುವಂತೆ ಮಾಡಬೇಕು. ಅರಿವು ಕಾರ್ಯಕ್ರಮಗಳಲ್ಲಿ ಸಲ್ಲಿಕೆಯಗುವ ಸಾರ್ವಜನಿಕರ ಅಹವಾಲುಗಳನ್ನು ಲೋಕಾಯುಕ್ತ ಸಂಸ್ಥೆಯ ಗಮನಕ್ಕೆ ತಂದಲ್ಲಿ ಅವುಗಳನ್ನು ಸರಕರದ ಗಮನಕ್ಕೆ ತಂದು ಕಾನೂನು ವ್ಯಾಪ್ತಿಯಲ್ಲಿ ಪರಿಹರಿಸಿ ಸಂಬಂಧಪಟ್ಟವರಿಗೆ ಸೂಕ್ತ ನ್ಯಾಯ ಒದಗಿಸಲಾಗುವುದು. ಅಲ್ಲದೇ ಲೋಕಾಯುಕ್ತಕ್ಕೆ ಸಲ್ಲಿಕೆಯಾಗುವ ಹಲವು ಸಾರ್ವಜನಿಕ ಅಹವಾಲುಗಳಲ್ಲಿ, ಕಾನೂನು ಸೇವಾ ಪ್ರಾಧಿಕಾರದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳನ್ನು ಸಂಬಂಧಪಟ್ಟ ಜಿಲ್ಲಾ ಮತ್ತು ತಾಲೂಕು ಸೇವಾ ಪ್ರಾಧಿಕಾರಗಳಿಗೆ ಸಲ್ಲಿಸಲಾಗುವುದು ಎಂದರು.
ಸಾರ್ವಜನಿಕರು ಕಾನೂನು ವ್ಯಾಪ್ತಿಗೆ ಒಳಪಡದೇ , ಕಾನೂನಿನಿಂದ ಹೊರಗೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಗೆ ಒಳ್ಳೆಯ ಬೆಳವಣಿಗೆ ಅಲ್ಲ. ಸಾರ್ವಜನಿಕರಿಗೆ ಶೀಘ್ರವಾಗಿ ನ್ಯಾಯ ದೊರೆಯುವಂತಾಗಬೇಕು. ನ್ಯಾಯಧೀಶರು ಯಾವುದೇ ಪ್ರಕರಣದಲ್ಲಿ ಒತ್ತಡಕ್ಕೆ ಒಳಗಾಗದೇ, ತಾಳ್ಮೆಯಿಂದ ಪ್ರಕರಣದ ವಾದ ವಿವಾದ ಆಲಿಸಿ, ನ್ಯಾಯಾಂಗ ವ್ಯವಸ್ಥೆ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆ ನಿರೀಕ್ಷೆಗಳಿಗೆ ತಕ್ಕಂತೆ ನ್ಯಾಯ ಒದಗಿಸುವ ಕೆಲಸ ಆಗಬೇಕು ಎಂದರು.
ನ್ಯಾಯಾಂಗ ಅಧಿಕಾರಿಗಳು ಲೋಕಾಯುಕ್ತ ಕಾಯಿದೆ ಯ ಕುರಿತಂತೆ ಸಮಗ್ರವಾಗಿ ಅರಿತು, ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಲೋಕಾಯುಕ್ತ ಎರಡು ಸಂಸ್ಥೆಗಳು ಒಟ್ಟಾಗಿ ಕರ್ತವ್ಯ ನಿರ್ವಹಿಸಿ, ಲೋಕಾಯಕ್ತ ಕಾಯಿದೆಯನ್ನು ಮತ್ತಷ್ಟು ಬಲಿಷ್ಠ ಪಡಿಸುವ ಮೂಲಕ ಸಮಾಜದಲ್ಲಿ ಉತ್ತಮ ಅಡಳಿತ ವ್ಯವಸ್ಥೆ ರೂಪುಗೊಳ್ಳುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯ ಕುಮಾರ್, ನ್ಯಾ. ಬಿ.ಎಲ್.ಮಾಯಣ್ಣ, ನ್ಯಾ. ಕಿರಣ್ ಕಿಣಿ, ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್, ಚನ್ನಕೇಶವ ರೆಡ್ಡಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಜಿಲ್ಲೆಯ ವಿವಿಧ ನ್ಯಾಯಾಧೀಶರುಗಳು ಉಪಸ್ಥಿತರಿದ್ದರು.ನ್ಯಾ.ರೇಷ್ಮಾ ರೋಡಿಗ್ರಸ್ ಸ್ವಾಗತಿಸಿ, ನಿರೂಪಿಸಿದರು. ನ್ಯಾ.ಮಹಾಂತೇಶ್ ಧರಗದ್ ವಂದಿಸಿದರು