ಶಿರಸಿ: ಮಾ.2ರಂದು ಬೆಳಿಗ್ಗೆ 8 ಘಂಟೆಗೆ ಶಿರಸಿ ಬಸ್‌ಸ್ಟಾಂಡಿನಿಂದ ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ನ್ನು ದೇವನಳ್ಳಿ-ಯಾಣ ಮಾರ್ಗವಾಗಿ ಗೋಕರ್ಣಕ್ಕೆ ಬಿಡಲಾಯಿತು.
ಈ ಪ್ರಯುಕ್ತ ದೇವನಳ್ಳಿಯಲ್ಲಿ ಬಸ್ಸಿನ ಪೂಜೆ ನೆರವೇರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ವಿ.ಆರ್.ಹೆಗಡೆ ಮಾತನಾಡಿ ಈ ಮಾರ್ಗದಲ್ಲಿ ಬಹಳ ದಿನಗಳಿಂದ ಸಾರಿಗೆ ಬಸ್ ಓಡಿಸುವ ಬೇಡಿಕೆ ಜನರಲ್ಲಿ ಇತ್ತು. ಶಿರಸಿ ಸಿದ್ದಾಪುರ, ಕಾರವಾರ ಅಂಕೋಲಾ ಶಾಸಕರು ವಿಶೇಷವಾಗಿ ಕಾಳಜಿ ವಹಿಸಿ ಸಾಗಾಟಕ್ಕೆ ಆದೇಶಿಸಿದರು. ಹಾಗೆಯೇ ಎನ್.ಡಬ್ಲು.ಕೆ.ಎಸ್.ಆರ್.ಟಿ.ಸಿ.ಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಇತರ ಎಲ್ಲಾ ಅಧಿಕಾರಿಗಳು ಸಹಕರಿಸಿದರು ಎಂದರು. ಅಲ್ಲದೇ ಸಾಮಾಜಿಕ ಕಾರ್ಯಕರ್ತ ಜಿ.ಎಮ್. ಶೆಟ್ಟಿ ಚೆನ್ನಗಾರರವರು ಈ ಹೋರಾಟಕ್ಕೆ ನಾಂದಿ ಹಾಕಿದವರು ಎಂದರು.
ದೇವನಳ್ಳಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಶಿರಸಿ ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ನಾರಾಯಣ ವಿ. ವೈದ್ಯ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ವಡ್ಡಿ ರಸ್ತೆಯ ಸಂಪರ್ಕ ರಸ್ತೆಗಾಗಿ ಹೋರಾಡಿದ್ದು ಇಂದು ಫಲಪ್ರದವಾಗಿದೆ. ಈ ಬಸ್ಸಿನ ಓಡಾಟಕ್ಕೆ ನಮ್ಮಲ್ಲಿಯ ಜನಪ್ರಿಯ ಶಾಸಕ ಭೀಮಣ್ಣ ನಾಯ್ಕರವರ ಪ್ರಯತ್ನವನ್ನು ಕೊಂಡಾಡಿದರು.
ಪೂಜೆಯ ಸಂದರ್ಭದಲ್ಲಿ ಊರಿನ ಪ್ರಮುಖರಾದ ಎಸ್.ಕೆ. ನಾಯ್ಕ, ನಾಗೇಶ ನಾಯ್ಕ, ರಾಮಚಂದ್ರ ಮರಾಠಿ, ರಮೇಶ ಗೌಡ, ಮಾಜಿ ತಾ.ಪಂ. ಸದಸ್ಯ ವಿನಾಯಕ ಭಟ್ಟ ಹೆಗ್ಗಾರು ಹಾಗೂ ಊರಿನ ಅನೇಕ ಗಣ್ಯರು ಮತ್ತು ವಾಯುವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಾದ ಪ್ರವೀಣ ಶೇಟ್, ಮಹೇಶ ಉಪಸ್ಥಿತರಿದ್ದರು.