ಹೊನ್ನಾವರ: ಹೊನ್ನಾವರ ಮೂಲದ, ಸೇಂಟ್ ಥಾಮಸ್ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ, ಪ್ರಸ್ತುತ ನಿವೃತ್ತ ವಿಜ್ಞಾನಿಯಾದ ಡಾ. ಸುರೇಂದ್ರ ಕುಲಕರ್ಣಿ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಕರ್ಕಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ “ಆಧುನಿಕ ಗುಣಮಟ್ಟದ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ”ವನ್ನು ಸ್ಥಾಪಿಸಲು ಶುಭಾರಂಭದ ಅಂಗವಾಗಿ ಸಭೆ ಕರೆಯಲಾಗಿತ್ತು.
ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ನೋಬೆಲ್ ಪುರಸ್ಕೃತ ಎಚ್. ಸಿ. ಬ್ರೌನ್‌ರೊಂದಿಗೆ ಕೆಲಸ ಮಾಡಿದ ಡಾ.ಶ್ರೀ ಸುರೇಂದ್ರ ಕುಲಕರ್ಣಿ ಇವರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ, ಪ್ರಶ್ನಿಸುವ ವೈಚಾರಿಕತೆ ಸೃಜಿಸುವ ಉದ್ದೇಶದಿಂದ ಉತ್ತಮ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯವನ್ನು ಆರಂಭಿಸುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಕೆನರಾ ವೆಲ್ಫೇರ್ ಟ್ರಸ್ಟ್ ನ ಕೆಲವು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗ ಪ್ರಯೋಗಾಲಯವನ್ನು ಆರಂಭಿಸಿರುತ್ತಾರೆ.
ಈ ಉತ್ತಮ ಕಾರ್ಯಕ್ಕೆ ಪ್ರೌಢಶಾಲೆಗೆ ಡಾ. ಸುರೇಂದ್ರ ಕುಲಕರ್ಣಿ ವೈಯಕ್ತಿಕವಾಗಿ 1,06,000/- ದೇಣಿಗೆಯಾಗಿ ನೀಡಿದ್ದು, ಅವರ ಪ್ರಯತ್ನದ ಮೂಲಕ ಕರ್ಕಿಯ, ಪ್ರಸ್ತುತ ಅಮೆರಿಕದಲ್ಲಿರುವ ಆನಂದ ಹಾಸ್ಯಗಾರ ಎರಡೂವರೆ ಲಕ್ಷ ರೂಪಾಯಿಯನ್ನು ಹಾಗೂ ಶ್ರೀರಾಮ ಹಾಸ್ಯಗಾರ ಒಂದು ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ಎನ್.ಆರ್.ಹೆಗಡೆ, ರಾಘೋಣ ಒಂದು ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದು, ಗಣೇಶ್ ಭಟ್, ಗದ್ದೆ, ಕರ್ಕಿ ಇವರು ಕೂಡ ದೇಣಿಗೆ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಈ ಸಂಬಂಧ ಶಾಲೆಗೆ ಆಗಮಿಸಿ ಆದರ್ಶ ಗುಣಮಟ್ಟದ ಪ್ರಯೋಗಾಲಯದ ರೀತಿ ನೀತಿಗಳನ್ನು, ವಿದ್ಯಾರ್ಥಿಗಳಿಗೆ ಅದನ್ನು ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸುವ ರೀತಿಯನ್ನು ತಿಳಿಸುತ್ತಾ, ತಮ್ಮ ಸಾಮಾಜಿಕ ಅನುಭವಗಳನ್ನು ಡಾ.ಸುರೇಂದ್ರ ಕುಲಕರ್ಣಿ ಶನಿವಾರ ಶಾಲೆಯ ಸಿಬ್ಬಂದಿಗಳೊಂದಿಗೆ ಮತ್ತು ಆಡಳಿತ ಮಂಡಳಿಯವರೊಂದಿಗೆ ಹಂಚಿಕೊಂಡರು. ಶಾಲೆಯಲ್ಲಿ ಸ್ಥಾಪಿತವಾಗುತ್ತಿರುವ ಈ ಪ್ರಯೋಗಾಲಯ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಮೂಲಕ ಅನುಕೂಲವಾಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿ ಡಾ. ಸುರೇಂದ್ರ ಕುಲಕರ್ಣಿ ಅವರನ್ನು ಶ್ಲಾಘಿಸಿ ಅಭಿನಂದಿಸಿದರು. ಇದಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರವನ್ನು ನೀಡಲು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕರು, ಶಾಲೆಯ ಎಲ್ಲ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾದ ಗಜಾನನ ಹೆಗಡೆ, ಉಪಾಧ್ಯಕ್ಷರಾದ ಎಂ.ಕೆ.ಭಟ್ ಸೂರಿ, ನಿರ್ದೇಶಕರುಗಳಾದ ಸುಬ್ರಾಯ ಭಟ್,ಸತೀಶ್ ಭಟ್, ಶ್ರೀಮತಿ ದುರ್ಗಾಬಾಯಿ ಜೋಶಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಈ ಪ್ರಯೋಗಾಲಯ ಬರಲು ಪ್ರಪ್ರಥಮವಾಗಿ ಡಾ. ಸುರೇಂದ್ರ ಕುಲಕರ್ಣಿ ಅವರಿಗೆ ಪ್ರೇರಣೆ ನೀಡಿದ ಜೀ.ಯು. ಭಟ್ಟರವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.