ಜೊಯಿಡಾ: ರಾಜ್ಯದ ಗಂಡು ಮೆಟ್ಟಿದ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ಕ್ಷೇತ್ರ ಉಳವಿ ಜಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡು ಒಂದು ವಾರ ಕಳೆದರೂ ಇಲ್ಲಿನ ಸ್ವಚ್ಛತಾ ಕಾರ್ಯ ಮುಗಿಯಲು ಮಾತ್ರ ಇನ್ನೂ ಒಂದು ವಾರ ಬೇಕೆ? ಎನ್ನುವ ಪ್ರಶ್ನೆ ಸುತ್ತಮುತ್ತಲಿನ ಹಳ್ಳಿಗರ ಪ್ರಶ್ನೆಯಾಗಿದೆ.
ಕಸದ ರಾಶಿ, ಆರೋಗ್ಯಕ್ಕೆ ಸಂಚಕಾರ:
ಎಲ್ಲಿ ನೋಡಿದರೂ ಕಸ, ಪ್ಲಾಸ್ಟಿಕ್ , ಹೆಚ್ಚಾಗಿ ಚೆಲ್ಲಿದ ಆಹಾರ ಕೊಳೆತು ಗಬ್ಬುನಾರುವ ವಾಸನೆ , ಗಟಾರ ತುಂಬಾ ಕೊಳಚೆ , ಮೂಗು ಮುಚ್ಚಿದರೂ ಸಹಿಸಲು ಅಸಾಧ್ಯವಾಗುವಂತಹ ಸ್ಥಿತಿ ಲಕ್ಷಾಂತರ ಜನರು ವಾರಗಳ ಕಾಲ ಜಾತ್ರೆ ನಡೆಸಿದ ಸ್ಥಳದಲ್ಲಾಗಿದೆ. ಜಿಲ್ಲಾ ಪಂಚಾಯತದ ಪ್ಲಾಸ್ಟಿಕ್ ಮುಕ್ತ ಜಾತ್ರೆ ಎಂಬ ಹೇಳಿಕೆ ಕೇವಲ ಹೇಳಿಕೆಯಾಗಿದೆಯೇ ವಿನಃ ಆಚರಣೆಯಲ್ಲಿ ನಡೆದಿಲ್ಲ. ಟನ್‌ಗಟ್ಟಲೆ ಪ್ಲಾಸ್ಟಿಕ್ ಮತ್ತು ಕಸಗಳನ್ನು ಎತ್ತುವವರೇ ಇಲ್ಲ. ಪ್ಲಾಸ್ಟಿಕ್ ಆಯ್ದು ಒಯ್ಯಲು ದೂರ ದೂರದ ಪಟ್ಟಣಗಳಿಂದ ಜನ ಬಂದಿದ್ದು ಅವರಿಂದಲೂ ಎತ್ತಲು ಸಾಧ್ಯವಾಗದ ರೀತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಈ ತ್ಯಾಜ್ಯಗಳು ಬಿದ್ದಿವೆ. ತ್ಯಾಜ್ಯಗಳನ್ನು ಹಾಕಲು ತೊಟ್ಟಿಗಳು ಇಲ್ಲದ ಕಾರಣ ಜಾತ್ರೆ ನಡೆದ ಪ್ರದೇಶವೆಲ್ಲ ಕಸಮಯವಾಗಿದೆ. ಪ್ರತಿ ದಿನ ನೂರಾರು ಜನರು ಕೆಲಸ ಮಾಡಿದರೂ ವಾರಗಳ ಕಾಲ ಬೇಕಾದ ಸ್ಥಳದಲ್ಲಿ ಬೆರಳೆಣಿಕೆಯಷ್ಟು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಶಾಲೆಗಳು ಬಂದಾಗಿವೆ:
ಜಾತ್ರೆ ನಡೆದ ಸ್ಥಳದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಉರ್ದು ಶಾಲೆಗಳಿದ್ದರೂ ಎಲ್ಲವೂ ಬಂದಾಗಿವೆ. ಇವು ಆರಂಭವಾಗಲು ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ. ಶಾಲೆ ಪ್ರೌಢಶಾಲೆಗಳಲ್ಲಿ ಭಕ್ತರು ವಾರಗಳ ಕಾಲ ವಾಸ ಮಾಡಿದ ಪರಿಣಾಮ ಗಬ್ಬೆದ್ದು ನಾರುತ್ತಿವೆ.
ಹೀಗಾಗಿ ಯಾವ ವಿದ್ಯಾರ್ಥಿಗಳೂ 15 ದಿನಗಳ ಕಾಲ ಇತ್ತ ಸುಳಿಯಲಾಗದಂತಹ ಪರಿಸ್ಥಿತಿಯಿದ್ದು, ಅವರ ಆರೋಗ್ಯದ ಹಿತದೃಷ್ಟಿಯಿಂದ ಇದು ಸರಿಯಾದರೂ ಶಾಲೆಗಳ ಅಭ್ಯಾಸದ ವ್ಯವಸ್ಥೆ ಆಗಬೇಕಾಗಿದೆ.
ಸ್ವಚ್ಛತೆ ಯಾರು ಮಾಡಬೇಕು:
ಜಾತ್ರೆಯ ನಂತರ ಪ್ರತಿ ವರ್ಷ ಇದೇ ಕತೆಯಾಗಿದ್ದು ಪ್ರತಿನಿತ್ಯ ಸ್ವಚ್ಛತಾ ಕೆಲಸ ನಡೆದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಸ್ವಚ್ಛತೆಯನ್ನು ಯಾರು ಮಾಡಬೇಕು ಎಂದು ಟ್ರಸ್ಟ್ ಕಮಿಟಿ , ಗ್ರಾಮ ಪಂಚಾಯತ ನಿರ್ಧರಿಸಿ ಆರಂಭದಿಂದಲೂ ಸ್ವಚ್ಛತಾ ಕೆಲಸ ಮಾಡಬೇಕಿತ್ತು ಎಂಬ ಮಾತು ಕೇಳಿಬಂದಿದೆ.
ಸ್ವಚ್ಛತೆ ಇಲ್ಲದ ಕಾರಣ ಅಕ್ಕ ಪಕ್ಕದ ಹಳ್ಳಿಗಳು ಉಳವಿಯತ್ತ ಮುಖ ಹಾಕುವುದಿಲ್ಲ. ಇಲ್ಲಿನ ಹೋಟೆಲ್‌ಗಳಲ್ಲಿ ಸದ್ಯ ಏನೂ ಸ್ವೀಕರಿಸುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ದನಕರುಗಳು ಕೂಡ ಪ್ಲಾಸ್ಟಿಕ್ ರಾಶಿಯಲ್ಲಿ ಮೇವು ಹುಡುಕಲು ಹಿಂದೇಟು ಹಾಕಿವೆ.
ಅತ್ಯಂತ ತ್ವರಿತಗತಿಯಲ್ಲಿ ಇಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕಿತ್ತು ಆದರೆ ಕೇವಲ ಬೆರಳಣಿಕೆಯಷ್ಟಿರುವ ಕಾರ್ಮಿಕರಿಂದ ಈ ಕೆಲಸ ಸದ್ಯ ಮುಗಿಯುವ ಲಕ್ಷಣಗಳಿಲ್ಲ. ಹತ್ತಾರು ಕಿಮೀ ರಸ್ತೆ ಅಕ್ಕಪಕ್ಕ ನೀರಿನ ತೊರೆ ಹೊಳೆ ಹಳ್ಳ ಎಲ್ಲಿ ನೋಡಿದರೂ ಮಲ-ಮೂತ್ರ ಮತ್ತು ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳು ತುಂಬಿದ್ದು, ಅರಣ್ಯ ಇಲಾಖೆ ಕೂಡ ಈಗ ಸ್ವಚ್ಚತೆಗಾಗಿ ಮುಂದಾದರೆ ಮಾತ್ರ ಉಳವಿಯ ಪರಿಸರ ಸುಂದರತೆ ಮತ್ತೆ ಬೇಗನೇ ಮರುಕಳಿಸಬಹುದು.