ಅತ್ತ ಶಿವ., ಇತ್ತ ರಾಮ; ಬಿಜಿಪಿಗೆ ಹೆಬ್ಬಾರ
ಯಲ್ಲಾಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯಸಭೆ ಚುನಾವಣೆಯು ಮಂಗಳವಾರ ಮುಗಿದಿದ್ದು, ಒಟ್ಟೂ 223 ಮತಗಳಲ್ಲಿ 222 ಶಾಸಕರ ಮತ ಮಾತ್ರ ಚಲಾವಣೆಯಾಗಿದ್ದು, ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಬಿಜೆಪಿ ಶಾಸಕ ಯಾರ ಪರವೂ ನಿಲ್ಲದೇ, ತಟಸ್ಥ ನಿಲುವು ತಳೆಯುವ ಮೂಲಕ ಬಿಜೆಪಿಗೆ ರೆಬೆಲ್ ಎನಿಸಿ, ಮತದಾನಕ್ಕೆ ಗೈರಾಗಿದ್ದಾರೆ.
ಮೊದಲಿನಿಂದಲೂ ಬಿಜೆಪಿಗರ ಮೇಲೆ ಮುನಿಸನ್ನು ಹೊಂದಿದ್ದ ಶಾಸಕ ಹೆಬ್ಬಾರ್, ಕಾಂಗ್ರೆಸ್ ಪರವೇ ಮನಸ್ಸು ಎಳೆಯುತ್ತಿತ್ತು. ಆದರೆ ಯಡ್ಯೂರಪ್ಪ ಪುತ್ರ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷ ಆದ ನಂತರ ಅನಿವಾರ್ಯವಾಗಿ ಬಿಜೆಪಿಯಲ್ಲಿಯೇ ಮುಂದುವರೆದಿದ್ದರೂ ಸಹ, ಸ್ವಪಕ್ಷೀಯರ ಮೇಲೆ ಆಕ್ರೋಷ ಒಳಗಿನಿಂದ ಇದ್ದೇ ಇತ್ತು. ಅದಕ್ಕೆ ದಿಟ್ಟ ಉತ್ತರವೆಂಬಂತೆ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಗೈರಾಗುವ ಮೂಲಕ ತನ್ನ ಗಟ್ಟಿತನವನ್ನು ಪ್ರದರ್ಶಿಸುವ ಮೂಲಕ ಬಿಜೆಪಿಯ ಹೈ ಕಮಾಂಡ್ ಗೆ ನೇರ ಸಂದೇಶವನ್ನು ಕಳಿಸಿದ್ದಾರೆ.
ನಿಲುಕದ ನಿರ್ಧಾರ – ಸವಾಲೆಸೆದ ಹೆಬ್ಬಾರ್
ರಾಜ್ಯ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಶಿವರಾಮ ಹೆಬ್ಬಾರ್, ಪಕ್ಷದಿಂದ ಯಾವಾಗಲೋ ಅಂತರ ಕಾಯ್ದುಕೊಳ್ಳುತ್ತಲೇ ಇದ್ದರು. ತಮ್ಮದೇ ಪಕ್ಷದ ಕೇಂದ್ರ ಸಚಿವರು ಬಂದಾಗಲೂ ಸಹ ಗೈರಾಗಿದ್ದರು. ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ಗೈರಾಗುವ ಮೂಲಕ ಪಕ್ಷಕ್ಕೆ ಖಡಕ್ ಸಂದೇಶ ನೀಡಿದ್ದಾರೆ. ಹಾಗಾಗಿ ಲೋಕ ಸಭೆ ಚುನಾವಣೆಗೂ ಮುನ್ನ ಹೆಬ್ಬಾರ್ ಅಲೆ ಯಾವ ಕಡೆ ಬೀಸಲಿದೆ ರಂದು ಕಾದು ನೋಡಬೇಕಿದೆ.