ಕುಮಟಾ: ಪಟ್ಟಣದ ವಿನಾಯಕ ರೆಕ್ಸಿನ್ ಹೌಸ್‌ನ ಸಭಾಭವನದಲ್ಲಿ ಇತ್ತೀಚಿಗೆ ನಿಧನರಾದ ತೆರಿಗೆ ಸಲಹೆಗಾರ ಹಾಗೂ ಸೌರಭ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದ ಎಂ. ಕೆ ಹೆಗಡೆಯವರಿಗೆ ಸೌರಭ ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಖ್ಯಾತ ವೈದ್ಯ ಹಾಗೂ ಸೌರಭ ಸಂಸ್ಥೆಯ ಉಪಾಧ್ಯಕ್ಷ ಡಾ. ಅನಿಲ ಹೆಗಡೆ, ಕಲಾ ಪ್ರೇಮಿಗಳಾಗಿದ್ದ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ಮುಂದಿದ್ದ ಅಲ್ಪಾಯುಷ್ಯದಲ್ಲಿ ನಮ್ಮೆಲ್ಲರನ್ನೂ ಬಿಟ್ಟು ತೆರಳಿದ್ದಾರೆ. ಅವರ ಅಗಲುವಿಕೆ ಸೌರಭ ಸಂಸ್ಥೆಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.
ನಾವು ಸಪ್ತಋಷಿಗಳಂತೆ ಒಟ್ಟಿಗೆ ಇದ್ದು ಸೌರಭ ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸಿದ್ದೆವು. ಸಮಾನ ಮನಸ್ಕರಾಗಿದ್ದ ನಾವು ಒಂದೇ ಚಿಂತನೆಯಲ್ಲಿ ಕಾರ್ಯ ಮಾಡುತ್ತಿದ್ದೆವು. ಅಂತರಾಷ್ಟ್ರೀಯ ಮಟ್ಟದವರೆಗೆ ಗಮನ ಸೆಳೆದ ಕಾರ್ಯಕ್ರಮಗಳನ್ನು ಮಾಡುವಲ್ಲಿ ಎಂ.ಕೆ ಹೆಗಡೆಯವರ ಪ್ರಯತ್ನ ಮರೆಯುವಂತಿಲ್ಲ. ಸರಳ ವ್ಯಕ್ತಿತ್ವದ ಸ್ನೇಹಜೀವಿಯನ್ನು ಕಳೆದುಕೊಂಡ ಸಮಾಜ ಬಡವಾಗಿದೆ ಎಂದರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ ಸೌರಭದ ಆಧಾರ ಸ್ತಂಭದಂತೆ ಇದ್ದ ಎಂ.ಕೆ. ಹೆಗಡೆಯವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಕಾರ್ಯಕ್ರಮದ ಮಹತ್ವವನ್ನು ತಿಳಿಸಿ, ದಾನಿಗಳ ಮನ ಒಲಿಸುವ ಕಾರ್ಯ ಮಾಡಿ, ಸೌರಭದ ಕಾರ್ಯಗಳನ್ನು ಯಶಸ್ವಿಯಾಗಿಸುತ್ತಿದ್ದರು ಎಂದು ಭಾವುಕರಾದರು.
ಸೌರಭದ ಸದಸ್ಯ ಶ್ರೀಕಾಂತ ಭಟ್ಟ ಮಾತನಾಡಿ, ಸಾಮಾಜಿಕ ಕಾರ್ಯಕರ್ತ, ದೈವೀಭಕ್ತ, ನೇರ ನಡೆ-ನುಡಿಯ ಸ್ನೇಹಮಯ ವ್ಯಕ್ತಿತ್ವದ ಎಂ. ಕೆ ಹೆಗಡೆಯವರ ಅಗಲಿಕೆ ವೈಯಕ್ತಿಕವಾಗಿಯೂ ಸಮಾಜದ ದೃಷ್ಟಿಯಿಂದಲೂ ಬಹುದೊಡ್ಡ ನಷ್ಟವಾಗಿದೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸಿದರು.
ಸೌರಭದ ಸದಸ್ಯ ಎಸ್.ವಿ ಹೆಗಡೆ ಮಾತನಾಡಿ ತೆರಿಗೆ ಸಲಹೆಗಾರರಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಕೆ ಹೆಗಡೆ, ವೈಯಕ್ತಿಕವಾಗಿ ನನಗೂ ನನ್ನ ವೃತ್ತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ರಾಮಚಂದ್ರಾಪುರ ಮಠದ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಸಮಾಜದ ಎಲ್ಲರ ನೋವು ನಲಿವಿಗೆ ಸ್ಪಂದಿಸಿದ ಅವರ ಅಗಲುವಿಕೆ ನೋವು ತಂದಿದೆ ಎಂದರು.
ವಿನಾಯಕ ರೆಕ್ಸಿನ್ ಹೌಸ್ ಮಾಲಿಕ ಸೌರಭ ಸದಸ್ಯ ವಿನಾಯಕ ಹೆಗಡೆಕಟ್ಟೆ ಎಂ.ಕೆ ಹೆಗಡೆಯವರ ಒಡನಾಟ ಬಹು ವರ್ಷಗಳದ್ದು, ಸರಳ ವ್ಯಕ್ತಿತ್ವ ಹಾಗೂ ಅಗಾಧವಾದ ಜ್ಞಾನ, ನೇರ ನಡೆನುಡಿಯ ಅವರು, ನಮ್ಮಂತಹ ಸಾವಿರಾರು ಯುವಕರನ್ನು ಮುನ್ನೆಲೆಗೆ ತಂದವರು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಸೌರಭ ಸಂಸ್ಥೆಯ ಸದಸ್ಯರುಗಳು, ಎಂ.ಕೆ ಹೆಗಡೆಯವರ ಹಿತೈಷಿಗಳು ಹಾಗೂ ಸಾರ್ವಜನಿಕರು ಹಾಜರಿದ್ದು ಮೌನ ವಂದನೆ ಸಲ್ಲಿಸಿ, ಅಗಲಿದ ಆತ್ಮಕ್ಕೆ ಚಿರ ಶಾಂತಿ ಕೋರಿದರು.