ಶಿರಸಿ:ನೆಲೆಮಾಂವು ಮಠದಲ್ಲಿ ಶ್ರೀ ಪುರುಷೋತ್ತಮ ನರಸಿಂಹ ಭಾರತಿ ಸನಾತನ ಸಭಾ ಹಾಗೂ ವೇದ ನಾದೋತ್ಸವ ಸಮಿತಿ ಸಂಘಟಿಸಿದ್ದ ವೇದ ನಾದ, ಭೋದೋತ್ಸವ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮ ಜನಮನ ತಣಿಸುವಲ್ಲಿ ಯಶಸ್ವಿಯಾಗಿದೆ.
ಆಮಂತ್ರಿತ ಕಲಾವಿದ ಗಾಯಕ ವಿನಾಯಕ ಹೆಗಡೆ ಮುತ್ಮುರ್ಡು ಅವರು ತಮ್ಮ ಸಂಗೀತ ಕಛೇರಿ ನಡೆಸಿಕೊಟ್ಟು ಆರಂಭಿಕವಾಗಿ ರಾಗ್ ಕೇದಾರ್‌ದಲ್ಲಿ ವಿಸ್ತಾರವಾಗಿ ಹಾಡಿದರು. ನಂತರ ಶಾರದಾ ಸ್ತುತಿ ಹಾಗೂ ಅರ್ಥಪೂರ್ಣವಾದ ಜನಪ್ರಿಯ ಹಾಡು ಗುರುವಿನ ಗುಲಾಮನಾಗುವ ತನಕ ದಾಸರ ಪದವನ್ನು ಶೃದ್ಧಾ ಭಕ್ತಿಯಿಂದ ಹಾಡಿ ಸಭೆಯ ಕರತಾಡನಕ್ಕೆ ಭಾಜನರಾದರು. ಅವರ ಗಾಯನಕ್ಕೆ ತಬಲಾದಲ್ಲಿ ವಿ. ಶೇಷಾದ್ರಿ ಅಯ್ಯಂಗಾರ್ ಮತ್ತು ಹಾರ‍್ಮೋನಿಯಂನಲ್ಲಿ ಅಜೇಯ ಹೆಗಡೆ ವರ್ಗಾಸರ ಹಾಗೂ ಸಹಗಾಯನ ಮತ್ತು ತಂಬೂರಾದಲ್ಲಿ ಮಲ್ಲಿಕಾ ವಿನಾಯಕ ಸಾಥ್ ನೀಡಿದರೆ ತಾಳದಲ್ಲಿ ಅನಂತಮೂರ್ತಿ ಸಹಕರಿಸಿದರು.
ಇದಕ್ಕೂ ಮೊದಲು ನಡೆದ ಗಾಯನದಲ್ಲಿ ಗಾಯಕಿ ಮೇಧಾ ಭಟ್ ಅಗ್ಗೆರೆ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್ ಯಮನ್ ಕಲ್ಯಾಣದಲ್ಲಿ ವಿಸ್ತಾರವಾಗಿ ಹಾಡಿದರು. ನಂತರದಲ್ಲಿ ದಾಸರ ಪದವೊಂದನ್ನು ಹಾಡುತ್ತ ಕೊನೆಯಲ್ಲಿ ಸ್ವತಃ ತಾವೇ ರಾಗ ಸಂಯೋಜಿಸಿದ ಜಯ ಜಯ ಶಂಕರ ಎಂಬ ಹಾಡನ್ನು ಹಾಡಿದರು. ಅಗ್ಗೆರೆ ಅವರ ಗಾಯನಕ್ಕೆ ತಬಲಾದಲ್ಲಿ ಅಕ್ಷಯ ಭಟ್ಟ ಅಂಸಳ್ಳಿ, ಹಾಗೂ ಹಾರ್ಮೋನಿಯಂನಲ್ಲಿ ವರ್ಗಾಸರ ಅಜೇಯ ಹೆಗಡೆ ಸಾಥ್ ನೀಡಿದರು. ಕಾರ್ಯಕ್ರಮ ಸಂಘಟಕ ಮನೋಜ ಭಟ್ಟ ಸ್ವಾಗತಿಸಿದರು. ವಿ. ಕೃಷ್ಣ ಭಟ್ಟ ಕಲಾವಿದರನ್ನು ಶಾಲು ಹೊದೆಸಿ ಗೌರವಿಸಿದರು. ಗಿರಿಧರ ಕಬ್ನಳ್ಳಿ ವಂದಿಸಿದರು.
/