ಶಿರಸಿ: ನಗರದ ಜನನಿ ಮ್ಯೂಸಿಕ್ ಸಂಸ್ಥೆ ತನ್ನ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ವಿಶೇಷವಾಗಿ ಏರ್ಪಡಿಸಲಾಗಿದ್ದ “ಯುವ ಧ್ವನಿ” ಸಂಗೀತ ಕಾರ್ಯಕ್ರಮದಲ್ಲಿ ಆಮಂತ್ರಿತ ಕಲಾವಿದೆ ಖ್ಯಾತ ಗಾಯಕಿ ವಿದುಷಿ ವಸುಧಾ ಶರ್ಮಾ ಸಾಗರ ಇವರ ಗಾನ ಮೋಡಿ ಸಂಗೀತಾಭಿಮಾನಿಗಳಿಗೆ ರಸದೂಟ ಬಡಿಸುವಲ್ಲಿ ಯಶಸ್ವಿಯಾಗಿದೆ.
ವೈವಿಧ್ಯಮಯ ರೀತಿಯಲ್ಲಿ ತಮ್ಮ ಸಂಗೀತ ಕಚೇರಿ ನಡೆಸಿಕೊಟ್ಟ ವಸುಧಾ ಶರ್ಮ, ಆರಂಭಿಕವಾಗಿ ರಾಗ ಯಮನ್ ಕಲ್ಯಾಣ್ ನಲ್ಲಿ ಒಂದು ಗಂಟೆಗೂ ಮಿಕ್ಕಿ ವಿಸ್ತಾರವಾಗಿ ಹಾಡುತ್ತಾ ವಿಲಂಬಿತ ತರಾನಾ ಪ್ರಸ್ತುತಗೊಳಿಸಿದರು. ತದನಂತರ ರಾಗ್ ಶಂಕರಾದಲ್ಲಿ ಭಗವತ್ಪಾದ ಶಂಕರಾಚಾರ್ಯರ ಗೀತೆಯನ್ನು ಸೊಗಸಾಗಿ ಹಾಡಿದರು. ನಂತರದಲ್ಲಿ ಮರಾಠಿ ಅಭಂಗವೊಂದನ್ನು ಭಕ್ತಿಯಿಂದ ಹಾಡಿದಾಗ ಇಡೀ ಸಭೆ ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿತು.
ಇವುಗಳೊಂದಿಗೆ ದಿ. ಚಿದಂಬರ ಹೆಗಡೆ ಮಂಗಳೂರು ರವರು ರಚಿಸಿದ ಸುಂದರ ಭಾವಗೀತೆ ಜನಾಪೇಕ್ಷೆಯ ಮೇರೆಗೆ ಒಂದು ನಾಟ್ಯ ಗೀತೆ ಹೀಗೆ ವೈವಿಧ್ಯಮಯವಾಗಿ ತಮ್ಮ ಕಚೇರಿ ನಡೆಸಿಕೊಡುತ್ತ ಕೊನೆಯಲ್ಲಿ ರಾಗ ಭೈರವಿಯೊಂದಿಗೆ ಮಂಗಳಾಷ್ಟಕವನ್ನು ಹಾಡಿ , ಸಂಗೀತ ಸಮಾರಾಧನೆಯನ್ನು ಸಮಾಪ್ತಿಗೊಳಿಸಿದರು. ಶ್ರೀಮತಿ ವಸುಧಾರವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಸಂವತ್ಸರ ಜೆ. ಸಾಗರ ಹಾಗೂ ತಬಲಾದಲ್ಲಿ ಗುರುರಾಜ್ ಆಡುಕಳ ಮತ್ತು ಹಿನ್ನೆಲೆಯ ತಾನ್ಪುರ ಮತ್ತು ಸಹಗಾಯನದಲ್ಲಿ ಯುವ ಗಾಯಕರಾದ ಶ್ರೀರಂಜನಿ ಮತ್ತು ಶ್ರೀಧರ್ ಶಾನ್ಭಾಗ್ ಸಾತ್ ನೀಡಿದರು.
ವಿ. ಶರ್ಮಾರವರ ಗಾಯನ ಪೂರ್ವದಲ್ಲಿ ಜನನಿ ಸಂಸ್ಥೆಯ ಪ್ರತಿಭಾನ್ವಿತ ಕಲಾವಿದೆ ಸ್ನೇಹ ಅಮ್ಮಿನಳ್ಳಿ ಹಾಗೂ ಹಿರಿಕಿರಿಯ ವಿದ್ಯಾರ್ಥಿಗಳು ತಮ್ಮ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿ ಕಿರಣ್ ಹೆಗಡೆ ಕಾನಗೋಡು, ವಿಜಯೇಂದ್ರ ಹೆಗಡೆ ಅಜ್ಜಿಬಳ, ಹಾಗೂ ಚೇತನ್ ಕುಮಾರ್ ಇನಾಮದಾರ್ ಸಹಕಾರ ನೀಡಿದರೆ ಹಾರ್ಮೋನಿಯಂನಲ್ಲಿ ವಿ.ರೇಖಾ ದಿನೇಶ್ ಹಾಗೂ ಉನ್ನತಿ ಕಾಮತ್ ಮತ್ತು ತಂಬೂರದಲ್ಲಿ ರೇಖಾ ಸತೀಶ್ ಭಟ್, ವಿಜಯಶ್ರೀ ಸಹಕರಿಸಿದರು.
ವಿಶೇಷವಾಗಿ ಜನನಿ ಸಂಸ್ಥೆಯ ವಿದ್ಯಾರ್ಥಿಗಳಾದ ವಿವಿಧ ಉದ್ಯಮದಲ್ಲಿರುವ ಪ್ರಭಾಕರ್ ಹೆಗಡೆ, ಗಣೇಶ ಕೂರ್ಸೆ , ಪ್ರವೀಣ್ ಕಾಮತ್, ಸಂತೋಷ್ ಶೇಟ್, ರಾಘವೇಂದ್ರ ಸಕಲಾತಿ, ಮತ್ತು ಅಮಿತ್ ಹಿರೇಮಠ ರವರ ಗಾಯನ ಸುಧೆ ಮನ ಸೆಳೆದಿದ್ದು, ಹೊಸತನದ ಸಂಗೀತದ ವಾತಾವರಣ ಸೃಷ್ಟಿಗೊಂಡಿತ್ತು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ ದಿನೇಶ್ ಹೆಗಡೆ ವಂದಿಸಿದರು.