ಶಿರಸಿ: ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನಜೀವನಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದಾಗಿ, ರಾಜ್ಯ ಸರಕಾರವು ಪತ್ರದ ಮೂಲಕ ಹೋರಾಟಗಾರರ ವೇದಿಕೆಗೆ ಮಾಹಿತಿ ನೀಡಿದ್ದಾರೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ, ಕಸ್ತೂರಿ ರಂಗನ್ ವರದಿ ವಿರೋಧಿಸಿ ರಾಜ್ಯ ಸರಕಾರ ಕ್ರಮ ಜರುಗಿಸಬೇಕೆಂದು ನೀಡಿದ ಮನವಿಗೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ (ಜೀವಿ ಪರಿಸ್ಥಿತಿ ಮತ್ತು ಪರಿಸರ) ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅವರು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರಿಗೆ ಪತ್ರದ ಮೂಲಕ ಸರಕಾರದ ನಿಲುವನ್ನು ಪ್ರಕಟಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ, 9 ತಾಲೂಕಿನ ವ್ಯಾಪ್ತಿಯ, 604 ಹಳ್ಳಿಗಳ ವರದಿಯಂತೆ 6998 ಚ.ಕೀ.ಮೀ ಅತೀ ಸೂಕ್ಷ್ಮ ಪ್ರದೇಶಕ್ಕೆ ಒಳಪಡಲಿರುವುದರಿಂದ, ಜಿಲ್ಲಾದ್ಯಂತ ಹೋರಾಟಗಾರರ ವೇದಿಕೆಯು ಸುಮಾರು ಒಂದು ಲಕ್ಷ ಕುಟುಂಗಳಿಂದ ವರದಿಗೆ ವಿರೋಧಿಸಿ ಆಕ್ಷೇಪಣಾ ಪತ್ರ ಸಲ್ಲಿಸುವ ಪ್ರಯತ್ನದೊಂದಿಗೆ, ಬೃಹತ್ ಹೋರಾಟ ಸಂಘಟಿಸಿ ಸರಕಾರದ ಮೇಲೆ ಒತ್ತಡ ಹೇರಲ್ಪಡಲಾಗಿತ್ತು ಎಂದು ಅವರು ತಿಳಿಸಿದರು.
ಪತ್ರದಲ್ಲಿ ಉಲ್ಲೇಖ:
ಡಾ|| ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ಕರಡು ಅಧಿಸೂಚನೆ ಹೊರಡಿಸಿದ್ದು. ಆದರೆ, ಅಂತಿಮ ಅಧಿಸೂಚನೆ ಹೊರಡಿಸುವುದು ಬಾಕಿ ಇರುತ್ತದೆ. ಮುಂದುವರೆದು ಸರ್ಕಾರದಿಂದ ಈ ಸಂಬಂಧ ಈಗಾಗಲೇ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿರುತ್ತದೆ ಎಂಬ ಮಾಹಿತಿಯನ್ನು ಪತ್ರದಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.