ಹೊನ್ನಾವರ : ತಾಲೂಕಿನ ಗುಂಡಬಾಳಾದ ಆರೋಗ್ಯ ಮಾತಾ ಪ್ರೌಢಶಾಲೆಯಲ್ಲಿ ಶಿಕ್ಷಕ ಪಾಲಕರ ಸಭೆ ಮತ್ತು ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಕ್ಷಯ ಕೋ-ಆಪ್ ಸೊಸೈಟಿಯ ನಿರ್ದೇಶಕರಾದ ಹೆನ್ರಿ ಲೀಮಾ, ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉತ್ತಮ ಸಂಸ್ಕಾರದಿಂದ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ತಿಳಿಸಿ ಪಾಲಕರಿಗೆ ನಿಮ್ಮ ಮಕ್ಕಳ ಅಭ್ಯಾಸದ ಜವಾಬ್ದಾರಿಯನ್ನು ಕೇವಲ ಶಿಕ್ಷಕರ ಮೇಲೆ ವಹಿಸದೆ ನೀವು ಕೂಡ ಮುತುವರ್ಜಿ ವಹಿಸಿ ಅವರ ಪ್ರಗತಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್.ಎಲ್.ಸಿ. ಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿ ವಿದ್ಯಾರ್ಥಿಗಳಿಗೆ 2,000 ರೂ. ಬಹುಮಾನ ನೀಡುವುದಾಗಿ ತಿಳಿಸಿ ಇದರ ಜೊತೆಗೆ ಶಾಲೆಯ ಅಭಿವೃದ್ಧಿಗಾಗಿ 50,000 ರೂ.ಗಳ ದೇಣಿಗೆ ನೀಡಿದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಸ್ತುತ ಅನುಸರಿಸುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ಪದ್ಧತಿಗಳ ಕುರಿತು ಪಾಲಕರಿಗೆ ತಿಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂ. ಫಾII ಥೋಮಸ್ ಫರ್ನಾಂಡಿಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅನುಗ್ರಹ ಕಾನ್ವೆಂಟ್ ನ ಸುಪೀರಿಯರ್ ಸಿII ಜೊಸ್ಪಿನ್, ಮುಖ್ಯಾಧ್ಯಾಪಕರಾದ ವಿಲ್ಸನ್ ಲುಯೀಸ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.