ಕೊಂಕಣ ಎಜ್ಯುಕೇಶನ್ ನಿಂದ ಸಂಸ್ಕಾರ ಕೊಡುವ ಕಾಯಕ : ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪಾದಪೂಜನ
ಕುಮಟಾ : ದೇವರಿಗಿಂತ ಹೆಚ್ಚಿನ ಪ್ರೀತಿ ಕೊಡಬಲ್ಲ ಜಗತ್ತಿನ ಜೀವಗಳು ಎಂದರೆ ಅದು ಮಾತಾಪಿತೃಗಳು. ಪ್ರೇಮದ ಹೆಸರಿನಲ್ಲಿ ಇಲ್ಲಸಲ್ಲದ ಚಟುವಟಿಕೆಗಳನ್ನು ನಡೆಸುವತ್ತ ಸಮಾಜ ಹಾಗೂ ಯುವ ಜನತೆ ಮುಂದಾಗುತ್ತಿದ್ದು, ಮುಂದಿನ ಸಮಾಜವನ್ನು ಸುಸಂಸ್ಕೃತವಾಗಿಸುವ ದಿಶೆಯಲ್ಲಿ ಕಳೆದೊಂದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ, ಪ್ರತೀವರ್ಷ ಫೇ.೧೪ ರಂದು ‘ಮಾತಾ ಪಿತೃಪೂಜನ’ ಕಾರ್ಯಕ್ರಮ ಹಮ್ಮಿಕೊಂಡು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಮಾದರಿಯಾಗಿದೆ.
ಬುಧವಾರ ಪ್ರೇಮಿಗಳ ದಿನವಾದ ಹಿನ್ನೆಲೆಯಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸರಸ್ವತಿ ವಿದ್ಯಾಕೇಂದ್ರದಲ್ಲಿ ‘ಮಾತಾ ಪಿತೃ ಪೂಜನ’ ಕಾರ್ಯಕ್ರಮ ಅರ್ಥವತ್ತಾಗಿ ಸಂಪನ್ನವಾಯಿತು. ಸುಮಾರು ನೂರಾರು ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪಾದ ತೊಳೆದು, ಹೂ, ಕುಂಕುಮಗಳಿಂದ ಅರ್ಚಿಸಿ, ಧೂಪಾರತಿ, ದೀಪಾರತಿಗಳ ಮೂಲಕ ಪೂಜಿಸಿ, ಸಿಹಿ ತಿನ್ನಿಸಿ, ಆಪಾದ ಮಸ್ತಕವಾಗಿ ಉದ್ದಂಡ ನಮಸ್ಕಾರ ಮಾಡಿ ಆಶೀರ್ವಾದಪಡೆದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತನ್ನಾಡಿದ ಶಿಕ್ಷಕ ಗಣೇಶ ಜೋಶಿ. ತಂದೆ ತಾಯಿಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿಯಲ್ಲಿ ಹುಟ್ಟಿದ ನಾವುಗಳು ಅವರ ಬದುಕಿಗೆ ಆಸರೆಯಾಗುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಂಸ್ಕಾರ ಇಲ್ಲದಿದ್ದರೆ ಬದುಕು ಬರಡು. ಸಂಸ್ಕಾರವನ್ನು ರೂಢಿಸಿಕೊಳ್ಳವತ್ತ ಸರ್ವರೂ ಪ್ರಯತ್ನ ಮಾಡಬೇಕು. ತಂದೆ ತಾಯಿಗಳನ್ನು ಗೌರವಿಸುವುದು ಆದ್ಯ ಕರ್ತವ್ಯವಾಗಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಅಶೋಕ ಭಟ್ಟ ಮಾತಾ ಪಿತೃ ಪೂಜನಕ್ಕೆ ಮಾರ್ಗದರ್ಶನ ಮಾಡಿದರು. ಮಕ್ಕಳಿಗೆ ಯಾವ ರೀತಿ ಅಭ್ಯಾಸ ಚಟುವಟಿಕೆ ನಡೆಸಬೇಕು, ತಂದೆ ತಾಯಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬ ಬಗ್ಗೆ ನೈಜ ಫಟನಾವಳಿಗಳ ಮೂಲಕ ವಿವರಿಸಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಮಾತಾ ಪಿತೃ ಪೂಜನದ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಾನಂದ ಪಾಂಡುರಂಗ ಪೈ, ಶೈಕ್ಷಣಿಕ ಸಲಹೆಗಾರ ಆರ್.ಎಚ್.ದೇಶಭಂಡಾರಿ, ಸರಸ್ವತಿ ಪಿ.ಯು ಕಾಲೇಜಿನ ಉಪಪ್ರಾಂಶುಪಾಲೆ ಸುಜಾತಾ ಹೆಗಡೆ, ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ ನಾಯ್ಕ ಇದ್ದರು. ಗೌರೀಶ ಭಂಡಾರಿ ನಿರೂಪಿಸಿದರು. ಬಾಲಮಂದಿರದ ಮುಖ್ಯಶಿಕ್ಷಕಿ ಸಾವಿತ್ರಿ ಹೆಗಡೆ ವಂದಿಸಿದರು.