ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘವು ಯಶಸ್ವಿಯಾಗಿ ಇಪ್ಪತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದ್ವಿದಶಮಾನೋತ್ಸವ ಆಚರಿಸಲಾಗುತ್ತಿದ್ದು, ಇದರ ಸಮಾರೋಪ ಕಾರ್ಯಕ್ರಮವನ್ನು ಫೆ.17ರಂದು ಉಮ್ಮಚಗಿಯಲ್ಲಿ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹೀರೇಸರ ಹೇಳಿದರು.
ಅವರು ಈ ಕುರಿತು ಶುಕ್ರವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿ, ಉತ್ತಮ ಗ್ರಾಹಕರಿಗೆ ಗೌರವ, ಸಂಸ್ಥಾಪಕ ಸದಸ್ಯರಿಗೆ ಸನ್ಮಾನ,ಸಂಸ್ಥೆಯ ಹಿತೈಷಿಗಳನ್ನು ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ದಿನವಿಡೀ ಕಾರ್ಯಕ್ರಮ ನಡೆಯಲಿದ್ದು, ಸ್ವರ್ಣವಲ್ಲಿ ಶ್ರೀಗಳು ಕೃಷಿ ಮಳಿಗೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಹಳ್ಳಿಹಾಡಿನ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ನಂತರ ಸಂಸ್ಥಾಪಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಮಧ್ಯಾಹ್ನ 3.30 ಕ್ಕೆ ಸಮಾರೋಪ ನಡೆಯಲಿದ್ದು, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ‘ದ್ವಿದಶಮಾನ ಯಾನ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಶಂಭುಲಿಂಗ ಹೆಗಡೆ, ಆರ್.ಎನ್.ಹೆಗಡೆ ಗೋರ್ಸಗದ್ದೆ, ವಿದ್ವಾನ್ ನಾಗೇಂದ್ರ ಭಟ್ ಹಿತ್ಲಳ್ಳಿ, ಡಾ.ಎಂ.ಎಸ್. ಮಾರಿಗೋಳಿ, ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರನ್ನು ಸನ್ಮಾನಿಸಲಾಗುವುದು. ನಂತರ ಶ್ರೀಪಾದ ಹೆಗಡೆ ಕಂಪ್ಲಿ ಅವರಿಂದ ಸಂಗೀತ ಕಾರ್ಯಕ್ರಮ, ಯಕ್ಷಪಲ್ಲವಿ ಟ್ರಸ್ಟ್ ಮಾಳಕೊಡ ಅವರಿಂದ ಯಕ್ಷ ಗಾನ ವೈಭವ ನಡೆಯಲಿದೆ ಎಂದರು.
ಈ ವೇಳೆ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ ಕಳಚೆ, ನಿರ್ದೇಶಕರಾದ ರವೀಂದ್ರ ಹೆಗಡೆ ಹಿರೇಸರ, ಆರ್ ಎಲ್ ಭಟ್ಟ, ಕೆ.ಎಸ್.ಭಟ್ಟ ಆನಗೋಡ, ಮುಖ್ಯ ಕಾರ್ಯನಿರ್ವಾಹಕ ಜಿ. ಎಸ್ ಹೆಗಡೆ, ಸಲಹಾ ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ, ಗೌರವ ಸಲಹೆಗಾರ ಜಿ ಕೆ ಹೆಗಡೆ ಕನೇನಹಳ್ಳಿ, ಶಾಖಾ ವ್ಯವಸ್ಥಾಪಕ ನೇತ್ರಾನಂದ ಮರಾಠೆ ಇದ್ದರು.