ದಾಂಡೇಲಿ : ಧಾರವಾಡ – ದಾಂಡೇಲಿ ರಸ್ತೆಯು ತೀವ್ರ ಹದಗೆಟ್ಟಿದ್ದು ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಪರಿಣಾಮವಾಗಿ ಸಾಕಷ್ಟು ಅಪಘಾತಗಳು ಸಂಭವಿಸುವಂತಾಗಿದೆ. ಆದ್ದರಿಂದ ಈ ಕೂಡಲೇ ಧಾರವಾಡದಿಂದ ದಾಂಡೇಲಿವರೆಗೆ ರಸ್ತೆ ದುರಸ್ತಿ ಮಾಡಬೇಕೆಂದು ದಾಂಡೇಲಿ ಕಾರ್ಪೆಂಟರ್ & ಟಿಂಬರ್ ಅಸೋಸಿಯೇಶನ್ ಅಧ್ಯಕ್ಷ ಪ್ರೇಮಾನಂದ ಗವಸ ಮನವಿ ಮಾಡಿದ್ದಾರೆ.
ಅವರು ಬುಧವಾರ ದಾಂಡೇಲಿ ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಪ್ರವಾಸೋದ್ಯಮವಾಗಿ ಬೆಳೆದು ನಿಂತ ದಾಂಡೇಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಧಾರವಾಡದ ಮೂಲಕ ಬರುತ್ತಾರೆ. ಆದರೆ ಆ ಪ್ರವಾಸಿಗರಿಗೆ ಧಾರವಾಡದಿಂದ ದಾಂಡೇಲಿಗೆ ಬರಲು ರಸ್ತೆ ಸಮಸ್ಯೆಯಿಂದ ತೀವ್ರ ಹೆಣಗಾಡಬೇಕಾಗಿದೆ. ಧಾರವಾಡದಿಂದ ದಾಂಡೇಲಿಯವರೆಗೂ ರಸ್ತೆಯುದ್ದಕ್ಕೂ ಹೊಂಡಗುಂಡಿಗಳಿದ್ದು, ಅತ್ಯಂತ ಪ್ರಯಾಸಪಟ್ಟು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ವಯೋವೃದ್ಧರು, ಗರ್ಭಿಣಿ ಮಹಿಳೆಯರು ಸಂಚರಿಸುವುದೇ ಕಷ್ಟ ಎಂಬಂತಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ.
ಈ ನಿಟ್ಟಿನಲ್ಲಿ ಪ್ರಯಾಣಿಕರ ಜೀವದ ಹಿತದೃಷ್ಟಿಯಿಂದ ಧಾರವಾಡ – ದಾಂಡೇಲಿ ರಸ್ತೆಯನ್ನು ದುರಸ್ತಿಗೊಳಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿದರು.