ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಾಗೂ ಟಾಟಾ ಹಿಟಾಚಿ ಸಹಯೋಗದಲ್ಲಿ ತಾಲೂಕಿನ ತೇರಗಾಂವ್ ಗ್ರಾಮದ ಕುಂಬಾರಕೇರಿ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ರೈತರ ಹಿತದೃಷ್ಟಿಯಿಂದ ಕೆರೆ ಹೂಳೆತ್ತುವ ಕಾರ್ಯವನ್ನು ಸಂಸ್ಥೆ ಆರಂಭಿಸಿದ್ದು, ರೈತರು ಸ್ವತಃ ಟ್ರ್ಯಾಕ್ಟರ್‌ಗಳನ್ನು ಬಳಸಿ ತಮ್ಮ ಹೊಲಗದ್ದೆಗಳಿಗೆಲ್ಲ ಫಲವತ್ತಾದ ಮಣ್ಣನ್ನು ಒಯ್ಯುತ್ತಿದ್ದಾರೆ. ಇದರಿಂದ ಕುಂಬಾರಕೇರಿ ಕೆರೆಯಲ್ಲಿ ಮುಂಬರುವ ಮಳೆಗಾಲದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ರೈತರಿಗೆ ಅನುಕೂಲವಾಗಲಿದೆ.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಕಾರ್ಯಕಾರಣಿ ಮಂಡಳಿ ಅಧ್ಯಕ್ಷರಾದ ಪ್ರಸಾದ್. ಆರ್. ದೇಶಪಾಂಡೆ ಬುಧವಾರ ಜಲ ಸಂರಕ್ಷಣೆ, ಕೆರೆಗಳ ಹೂಳೆತ್ತುವ ಮತ್ತು ಪುನರುಜ್ಜಿವನ ಕಾರ್ಯವನ್ನು ಖುದ್ದಾಗಿ ವೀಕ್ಷಿಸಿದ ನಂತರ ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಕೈಗೊಂಡ ಈ ಮಹತ್ವದ ಕಾರ್ಯ ಚಟುವಟಿಕೆಗೆ ಹಾಗೂ ಟಾಟಾ ಹಿಟಾಚಿ ಸಂಸ್ಥೆಯ ಅಧಿಕಾರಿಗಳಿಗೆ ಮತ್ತು ರೈತರು ಅಭಿನಂದನೆಗಳನ್ನು ಸಲ್ಲಿಸಿದರು.
ಕೃಷಿ ಭೂಮಿ ಹಸನಾದರೆ ದೇಶ ಸಮೃದ್ಧ: ತಾಂತ್ರಿಕತೆ ಎಷ್ಟೇ ಮುಂದುವರಿದರೂ ಕೃಷಿ ಭೂಮಿ ಹಸನಾದರೆ ಮಾತ್ರ ದೇಶ ಸಮೃದ್ಧವಾಗಿರಲು ಸಾಧ್ಯ. ರೈತನ ಶ್ರಮ ಜೀವನದಿಂದಾಗಿ ನಾವು ನೀವೆಲ್ಲರೂ ಸ್ವಚ್ಚಂದವಾಗಿ ಇರಲು ಸಾಧ್ಯವಾಗಿದೆ. ಕೃಷಿ ಕ್ಷೇತ್ರ ಸಮೃದ್ಧವಾಗಬೇಕಾದರೆ ಸೂಕ್ತ ನೀರಾವರಿ ವ್ಯವಸ್ಥೆಯಿರಬೇಕು. ಸಮರ್ಪಕ ನೀರಾವರಿ ಇದ್ದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಪಡೆಯಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ರೈತರ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಂಸ್ಥೆ ಕೆರೆ ಹೂಳೆತ್ತುವ ಕಾರ್ಯವನ್ನು ಪ್ರತಿವರ್ಷವೂ ಮಾಡುತ್ತಾ ಬರುತ್ತಿದೆ ಎಂದು ಇದೇ ಸಂದರ್ಭದಲ್ಲಿ ಪ್ರಸಾದ್.ಆರ್.ದೇಶಪಾಂಡೆ ಹೇಳಿದರು.