ಸಿದ್ದಾಪುರ: ಪ್ರತಿಯೊಬ್ಬ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿ ಅಡಗಿರುತ್ತದೆ. ಮಕ್ಕಳು ಮಾನವ ರೂಪದ ಸುಂದರ ಪುಷ್ಪಗಳಿದ್ದಂತೆ. ಅದಕ್ಕಾಗಿ ಪಾಲಕರು ಮಕ್ಕಳ ಮನದಾಳ ಅರಿತು ಸೂಕ್ತ ಅವಕಾಶ ಕಲ್ಪಿಸಿ ಬೆಳೆಸಬೇಕೆಂದು ಸಿದ್ದಾಪುರ ತಾಲೂಕಿನ ನಿಕಟ ಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ ಗೋಳಗೋಡ ನುಡಿದರು.
ಅವರು ನಿನ್ನೆ ತಾಲೂಕಿನ ಹಲಗೇರಿ ಸಮೀಪದ ಹುಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಕ.ಸಾ.ಪ. ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ ಪಾಲಕರು ಮಕ್ಕಳಿಗೆ ತಮ್ಮ ಗ್ರಾಮಗಳಲ್ಲೇ ಉತ್ತಮ ಶಿಕ್ಷಣ ಲಭ್ಯವಾಗಿದ್ದು ಸ್ಥಳಿಯ ಸರ್ಕಾರಿ ಶಾಲೆಗಳಲ್ಲಿ ಕೊಡಿಸಿದರೆ ಮುಂದೆ ಉನ್ನತ ಶಿಕ್ಷಣ ಹಾಗೂ ನೌಕರರಿಗೆ ಸರಕಾರದ ಗ್ರಾಮೀಣ ಮತ್ತು ಕನ್ನಡ ಮಾದ್ಯಮದ ಕೃಪಾಂಕ ಸೌಲಭ್ಯ ವರದಾನವಾಗಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ನಾಯ್ಕ ಮಾತನಾಡಿ ಶಾಲೆಯ ಪ್ರಗತಿಯಲ್ಲಿ ಮುಖ್ಯ ಶಿಕ್ಷಕ ಎಂ.ಕೆ. ನಾಯ್ಕ ಮತ್ತು ಉಳಿದ ಶಿಕ್ಷಕರ ಅವಿರತ ಶ್ರಮವನ್ನು ಶ್ಲಾಘಿಸಿದರು.
ಎಸ್.ಡಿ.ಎಮ್.ಸಿ. ಅಧ್ಯಕ್ಷ ರಾಜು ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕರು ,ಊರ ನಾಗರಿಕರು, ಹಾಗೂ ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಸ್ಮರಿಸಿದರು. ಉಪಾಧ್ಯಕ್ಷೆ ಅನುಪಮಾ ನಾಯ್ಕ, ಗ್ರಾಮ ಕಮಿಟಿ ಅಧ್ಯಕ್ಷ ವಸಂತ ನಾಯ್ಕ, ಮಾಜಿ ಅಧ್ಯಕ್ಷ ಮೋಹನ ನಾಯ್ಕ ಎಸ್ ಡಿ.ಎಮ್.ಸಿ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಕ್ಷಕಿ ಭವಾನಿ ದಂಪತಿಗಳನ್ನು ಗೌರವಿಸಲಾಯಿತು. ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ, ರೈತಗೀತೆ ಹಾಡಿದರು. ಮುಖ್ಯ ಶಿಕ್ಷಕ ಎಮ್.ಕೆ. ನಾಯ್ಕ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ರವಿ ನಾಯ್ಕ,ಮತ್ತು ಸುವರ್ಣ ನಿರೂಪಿಸಿದರು. ಶಿಕ್ಷಕಿ ಭವಾನಿ ವಂದಿಸಿದರು.