ಸಿದ್ದಾಪುರ: ಯಕ್ಷಗಾನ ಹಿಮ್ಮೇಳ ವೈಭವ, ಸಾಧಕ ಕಲಾವಿದರಿಗೆ ಸಮ್ಮಾನ, ಯಕ್ಷ ರೂಪಕ ಪ್ರದರ್ಶನ ಕಾರ್ಯಕ್ರಮವನ್ನು ಫೆಬ್ರವರಿ 8ರ ಸಂಜೆಗೆ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಏರ್ಪಡಿಸಲಾಗಿದೆ.
ವಿಶ್ವಶಾಂತಿ ಸೇವಾ ಟ್ರಸ್ಟ್, ಕರ್ನಾಟಕವು ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಹಾರ್ಸಿಕಟ್ಟಾ ಗಜಾನನೋತ್ಸ ಸಮಿತಿ ಹಾಗೂ ಗೆಳೆಯರ ಬಳಗ ಸಹಕಾರ ನೀಡಿದೆ. 6ಕ್ಕೆ ಯಕ್ಷಗಾನದ ಹಳೆ ಮಟ್ಟಿನ ಪದ್ಯಗಳ ಹಾಡುಗಾರಿಕೆ ನಡೆಯಲಿದ್ದು, ಭಾಗವತಿಕೆಯಲ್ಲಿ ಪ್ರಸಿದ್ಧ ಭಾಗವತರಾದ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಡ್ಕಲ್, ಮದ್ದಲೆಯಲ್ಲಿ ಶರತ್ ಜಾನಕೈ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸ್ರಕೊಪ್ಪ ಸಹಕಾರ ನೀಡಲಿದ್ದಾರೆ.
6.45ಕ್ಕೆ ಹಿರಿಯ ಭಾಗವತರಾದ ಸತೀಶ ಹೆಗಡೆ ದಂಟ್ಕಲ್ ಅವರಿಗೆ ಸಮ್ಮಾನ ನಡೆಯಲಿದ್ದು, ಅಧ್ಯಕ್ಷತೆಯನ್ನು ವಿಶ್ವಶಾಂತಿ ಟ್ರಸ್ಟ್ ಉಪಾಧ್ಯಕ್ಷ ರಮೇಶ ಹೆಗಡೆ ಹಳೆಕಾನಗೋಡ ವಹಿಸಿಕೊಳ್ಳುವರು.
ಅತಿಥಿಗಳಾಗಿ ಟಿಎಸ್ಎಸ್ ನಿರ್ದೇಶಕ ರವೀಂದ್ರ ಜಯಪ್ರಕಾಶ ಹೆಗಡೆ ಹೀರೆಕೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಗಜಾನನೋತ್ಸವ ಸಮಿತಿ ಅಧ್ಯಕ್ಷ ಎಲ್.ಜಿ. ಹೆಗಡೆ, ಕಾರ್ಯದರ್ಶಿ ಅನಂತ ಶಾನಭಾಗ್ ಪಾಲ್ಗೊಳ್ಳುವರು.
ಬಳಿಕ ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಸಾಹಿತ್ಯದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ನಿರ್ದೇಶನದ ವಿಶ್ವ ಶಾಂತಿ ಸರಣಿಯ 9ನೆ ಕಲಾ ಕುಸುಮ ‘ಲೀಲಾವತಾರಮ್’ ಯಕ್ಷರೂಪಕ ಪ್ರದರ್ಶನ ಕಾಣಲಿದೆ. ಯಕ್ಷಗಾನದ ಕಿಶೋರ ಕಲಾವಿದೆ ಕು.ತುಳಸಿ ಹೆಗಡೆ ಶಿರಸಿ ಪ್ರಸ್ತುತಗೊಳಿಸಲಿದ್ದು, ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶರತ್ ಜಾನಕೈ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸ್ರಕೊಪ್ಪ ಸಹಕಾರ ನೀಡಲಿದ್ದಾರೆ. ಪ್ರಸಾಧನವನ್ನು ವೆಂಕಟೇಶ ಬೊಗ್ರಿಮಕ್ಕಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.