ಶಿರಸಿ: ಪ್ರತಿಭೆ ಮತ್ತು ಪಾಂಡಿತ್ಯ ಗೊತ್ತಾಗುವುದು ಕಲಾವಿದನಿಂದಾಗಿದ್ದು ಕಲೆಯು ಔಚಿತ್ಯ ಕಳೆದುಕೊಂಡರೆ ವಿನಾಶವಾದಂತೆ. ಹಾಗಾಗದಂತೆ ನೋಡಿಕೊಳ್ಳುವ ಮಹತ್ತರವಾದ ಜವಾಬ್ದಾರಿ ಕಲಾವಿದರ ಮೇಲಿದೆ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಹೇಳಿದರು.
ನಗರದ ಟಿಎಂಎಸ್ ಸಭಾಭವನದಲ್ಲಿ ಸ್ಥಳೀಯ ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕ ಸ್ನೇಹ ಸಮ್ಮೆಳನದಲ್ಲಿ ಯಕ್ಷಗುರು, ಹಿರಿಯ ಭಾಗವತ ಗೋಪಾಲ ಗಾಣಿಗ ಹೇರಂಜಾಲು ದಂಪತಿಯನ್ನು ಸನ್ಮಾನಿಸಿ ಮಾತನಾಡಿ, ಕಲೆ ಮತ್ತು ಕಲಾವಿದನ ಅನ್ಯೋನ್ಯ ಸಂಬಂಧಕ್ಕೆ ಬೆಲೆ ಕಟ್ಟಲಾಗದ್ದು, ಯೋಚನಾ ಶಕ್ತಿ ಬುದ್ಧಿಮತ್ತೆಯ ತಲೆಯಿರುವವರು ಕಲಾಮಾತೆಗೆ ತಲೆಬಾಗುತ್ತಾರೆ. ಕಲೆಯಲ್ಲಿ ಮೇಳೈಸುವ ಅಭ್ಯಾಸ ಮಾಡಿಕೊಳ್ಳಬೇಕು. ಸಮಾಜದಿಂದ ಪ್ರಶಂಸೆಗೆ ಪಾತ್ರನಾದಂತೆ ಬರುವ ತೆಗಳಿಕೆಯ ಆತ್ಮಾವಲೋಕನ ಮಾಡಿಕೊಳ್ಳುವ ಗುಣ ಕೂಡ ಕಲಾವಿದ ಹೊಂದಿರಬೇಕು. ತನ್ಮೂಲಕ ಒಳ್ಳೆಯದಕ್ಕೆ ವಾರಸುದಾರರಾಗಿ ಯುವಪೀಳಿಗೆಗೆ ಮಾರ್ಗದರ್ಶನಕಾರರಾಗಿ, ಹಿರಿಯರನ್ನು ಗೌರವಿಸುವ ಅಂತಃಕರಣ ಹೊಂದಿದ್ದರೆ ಕಲಾವಿದನ ಬದುಕು ಕೂಡಾ ಹಸನಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನಾ ನುಡಿಗಳನ್ನಾಡಿದ ತಾಳಮದ್ದಲೆಯ ಖ್ಯಾತ ಅರ್ಥದಾರಿ, ಸೆಲ್ಕೋ ಸೋಲಾರ್ ಸಿಇಒ ಮೋಹನ ಹೆಗಡೆ ಹೆರವಟ್ಟಾ ಮಾತನಾಡಿ, ಹೇರಂಜಾಲು ಗಾಣಿಗ ಭಾಗವತರ ಕುಟುಂಬ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ವಿವರಿಸಿದರು.
ಅತಿಥಿಯಾಗಿದ್ದ ಧಾರವಾಡ ಹಾಲು ಒಕ್ಕೂಟ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ, ಯಲ್ಲಾಪುರ ಟಿಎಂಎಸ್ ಅಧ್ಯಕ್ಷ ನರಸಿಂಹ ಕೋಣೆಮನೆ ಅವರು ಹಿಲ್ಲೂರು ಭಾಗವತರ ಪರಿಶ್ರಮ, ಕಾರ್ಯವೈಖರಿ ಶ್ಲಾಘಿಸಿದರು.
ರಕ್ತದಾನಿ ರವಿ ಹೆಗಡೆ ಶಿರಸಿ ಇವರಿಗೆ ಪ್ರೋತ್ಸಾಹ ಸನ್ಮಾನ, ಚಂಡೆವಾದಕ ಗಜಾನನ ಭಂಡಾರಿ ಕರ್ಕಿ ಇವರಿಗೆ ಸಹಾಯಧನ ನೀಡಲಾಯಿತು.
ಇದಕ್ಕೂ ಪೂರ್ವದಲ್ಲಿ ಆಯೋಜಿಸಿದ್ದ ತಾಳಮದ್ದಲೆ ಕಾರ್ಯಕ್ರಮದಲ್ಲಿ ನರಸಿಂಹ ಶಾಸ್ತ್ರಿ ಹಲಸಿನಳ್ಳಿ ಇವರು ರಚಿಸಿದ ಅಂಬಾ ಶಪಥ ಪ್ರಸಂಗ ನಡೆದು ಹಿಮ್ಮೇಳದಲ್ಲಿ ಗೋಪಾಲ ಗಾಣಿಗ ಹೇರಂಜಾಲು ಹಾಗೂ ಗಜಾನನ ಭಟ್ಟ ತುಳಗೇರಿ ಭಾಗವತರಾಗಿ, ಮದ್ದಲೆಯಲ್ಲಿ ಎ.ಪಿ.ಪಾಠಕ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ ಪಾಲ್ಗೊಂಡರು. ಮುಮ್ಮೇಳದಲ್ಲಿ ಭೀಷ್ಮನಾಗಿ ಜಿ.ಎಲ್. ಹೆಗಡೆ ಕುಮಟಾ, ಅಂಬೆಯಾಗಿ ಮೋಹನ ಹೆಗಡೆ ಹೆರವಟ್ಟಾ, ಪರಶುರಾಮನಾಗಿ ಮಂಜುನಾಥ ಗೋರಮನೆ ಯಕ್ಷ ವಾತಾವರಣ ಕಟ್ಟಿಕೊಟ್ಟರು.
ನಂತರದಲ್ಲಿ ಸಂಘಟಿಸಿದ್ದ ಕವಿ ದಿನೇಶ ಹೆಗಡೆ ತಲಕಾಲಕೊಪ್ಪ ವಿರಚಿತ ಶಿಖಿ ಚರಿತ (ಭಕ್ತಸುಧಾಮ) ಯಕ್ಷಗಾನ ಆಖ್ಯಾನ ಪ್ರದರ್ಶಿಸಲ್ಪಟ್ಟಿತು. ಹಿಮ್ಮೇಳದ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ತುಳಗೇರಿ ಗಜಾನನ ಭಟ್ಟ, ಮದ್ದಲೆಯಲ್ಲಿ ಅನಿರುದ್ಧ ವರ್ಗಾಸರ, ಚಂಡೆಯಲ್ಲಿ ಹೆಗ್ಗಾರ ಪ್ರಸನ್ನ ಪಾಲ್ಗೊಂಡರು. ಮುಮ್ಮೇಳದ ಪಾತ್ರದಾರಿಗಳಾಗಿ ಕೃಷ್ಣ ಯಾಜಿ ಬಳಕೂರು, ಅಶೋಕ ಭಟ್ಟ ಸಿದ್ದಾಪುರ, ಕಾರ್ತಿಕ ಚಿಟ್ಟಾಣಿ, ಸುಧೀರ ಉಪ್ಪೂರು, ಶ್ರೀಧರ ಹೆಗಡೆ ಚಪ್ಪರಮನೆ, ಮಹಾಬಲೇಶ್ವರ ಭಟ್ಟ ಇಟಗಿ, ಮಂಜುನಾಥ ಹಿಲ್ಲೂರು ಪಾಲ್ಗೊಂಡು ಕಳೆಗಟ್ಟಿದರು.
ಹಿಲ್ಲೂರು ಯಕ್ಷಮಿತ್ರ ಬಳಗದ ಕಾರ್ಯದರ್ಶಿ ರಮ್ಯಾ ರಾಮಕೃಷ್ಣ ಸ್ವಾಗತಿಸಿದರು. ಮುಖ್ಯಸ್ಥ ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸಂಸ್ಥೆಯ ಧ್ಯೇಯೋದ್ದೆಶ ವಿವರಿಸಿದರು. ವಿವೇಕ ಹೆಗಡೆ ಕೊಂಡಲಗಿ ಸನ್ಮಾನಪತ್ರ ವಾಚಿಸಿದರು. ನಾಗರಾಜ ಜೋಶಿ ಸೋಂದಾ ನಿರೂಪಿಸಿದರು.