Slide
Slide
Slide
previous arrow
next arrow

ಫೆ.18 ರಿಂದ ಶ್ರೀಸ್ವರ್ಣವಲ್ಲೀಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ

300x250 AD

ಶಿರಸಿ: 1300 ವರ್ಷಗಳ ಇತಿಹಾಸ ಇರುವ ತಾಲೂಕಿನ ಸೋಂದಾ ಶ್ರೀಸ್ವರ್ಣವಲ್ಲೀ ಮಠದ ಶಿಷ್ಯ ಸ್ವೀಕಾರ ಕಾರ್ಯಕ್ರಮವು ಫೆ.18 ರಿಂದ 22 ರವರೆಗೆ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಶಿಷ್ಯ ಸ್ವೀಕಾರ ಸಮಾರಂಭ ಜರುಗಲಿದೆ.

ಈ ಕುರಿತು ನಗರದ ಯೋಗ ಮಂದಿರದಲ್ಲಿ ಶ್ರೀಮಠದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ನಳ್ಳಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಲ್ಲಾಪುರ ತಾಲೂಕು ಈರಾಪುರದ ವೇ.ನಾಗರಾಜ ಭಟ್ಟರನ್ನು ಶ್ರೀಗಳು ಉತ್ತರಾಧಿಕಾರಿ ಶಿಷ್ಯರನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಶಿಷ್ಯ ಸ್ವೀಕಾರ ಮಹೋತ್ಸವ ಕಾರ್ಯಕ್ರಮ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಠದ ಪರಂಪರೆಯಲ್ಲಿ ಇದೊಂದು ಮೈಲುಗಲ್ಲಿನ ಕಾರ್ಯಕ್ರಮವಾಗಲಿದೆ ಎಂದರು.

ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಳೆದ 33 ವರ್ಷಗಳಿಂದ ತಮ್ಮ ತ್ರಿಕಾಲ ಅನುಷ್ಠಾನ, ಜಪ-ತಪಗಳಿಂದ ಶಿಷ್ಯರಲ್ಲಿ ಧರ್ಮ ಪ್ರಜ್ಞೆ ಜಾಗೃತಗೊಳಿಸಿದ್ದಾರೆ. ಭಗವದ್ಗೀತಾ ಅಭಿಯಾನದ ಮೂಲಕ ರಾಜ್ಯದ ಮನೆಮಾತಾಗಿರುವ ಅವರು, ಸಾಮಾಜಿಕ ಕಾರ್ಯಕ್ರಮಗಳಾದ ಪರಿಸರ, ಶಿಕ್ಷಣ, ಆರೋಗ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುನ್ನಡೆಸಲು 20 ಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ಸ್ಥಾಪಿಸಿ ಮಾರ್ಗದರ್ಶನ ನೀಡಿದ್ದಾರೆ. ಕಳೆದ ಆರು ವರ್ಷಗಳ ಹಿಂದೆಯೇ ತಮ್ಮ ಉತ್ತರಾಧಿಕಾರಿ ಶಿಷ್ಯರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದರು ಎಂದರು.

ಫೆ.13 ರಿಂದ ಶಿಷ್ಯ ಸ್ವೀಕಾರದ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಅಂದು ಮುಂದಿನ ಸ್ವಾಮಿಗಳಾಗಲಿರುವ ವೇ. ನಾಗರಾಜ ಭಟ್ಟ ಅವರನ್ನು ಮಠಕ್ಕೆ ಕರೆತರಲಾಗುತ್ತದೆ. ಫೆ.18ರಂದು ಗಣಪತಿ ಪೂಜೆಯೊಂದಿಗೆ ಗೋದಾನ, ಗಾಯತ್ರೀ ಜಪ, ಐದು ವೇದಗಳ ಪಾರಾಯಣ ನಡೆಯಲಿದೆ. ಅಂದು ಸಂಜೆ 3.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅವರ ಪೀಠಾರೋಹಣದಿಂದ ಇಂದಿನವರೆಗಿನ ಸನ್ನಿವೇಶಗಳ ಸಂಪುಟ ಸ್ವರ್ಣಶ್ರೀ ಬಿಡುಗಡೆಗೊಳಿಸಲಾಗುವುದು. ಸಚಿವ ಮಂಕಾಳ ವೈದ್ಯ, ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್.ವಿ. ದೇಶಪಾಂಡೆ, ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ದಿನಕರ ಶೆಟ್ಟಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

300x250 AD

ಫೆ.19ರಂದು ಲಕ್ಷ್ಮೀನೃಸಿಂಹ ಮಂತ್ರ ಜಪ, ಫೆ.20ರಂದು ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಫೆ.21 ರಂದು ಸನ್ಯಾಸಗ್ರಹಣ ಸಂಕಲ್ಪ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಆಲೋಕಯಾಂಬ ಲಲಿತೇ ಕೃತಿ ಬಿಡುಗಡೆ, ಶಿರಳಗಿ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರಿಂದ ಪ್ರವಚನ, ಮೈಸೂರಿನ ಕೆ.ಎಲ್.ಶಂಕರನಾರಾಯಣ ಜೋಯಿಸ್ ಅವರಿಂದ ಉಪನ್ಯಾಸ ನಡೆಯಲಿದೆ. ಚಾಮರಾಜಪೇಟೆ ಶೃಂಗೇರಿಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಹೊಳೆನರಸಿಪುರದ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಫೆ.22ರಂದು ನಡೆಯುವ ಧರ್ಮ ಸಭೆಯಲ್ಲಿ ಮೈಸೂರಿನ ಶ್ರೀ ಶಂಕರಭಾರತೀ ಸ್ವಾಮೀಜಿ ಯಡತೊರೆ, ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಬೆಂಗಳೂರು ಚಾಮರಾಜಪೇಟೆಯ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಹೊಳೆ ನರಸಿಪುರದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ಕಾಸರಗೋಡಿನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ನೆಲೆಮಾವಿನ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ, ತರುವೆಕೆರೆಯ ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿ, ಕಾಂಚಿಪುರದ ಶ್ರೀ ಆತ್ಮಬೋಧತೀರ್ಥ ಸ್ವಾಮೀಜಿ, ಶ್ರೀ ಸಹಜಾನಂದತೀರ್ಥ ಸ್ವಾಮೀಜಿ, ಶ್ರೀ ಅಂಜನಾನಂದತೀರ್ಥ ಸ್ವಾಮೀಜಿ, ಸ್ವರ್ಣವಲ್ಲೀ ಮಠದ ನೂತನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇದೇ ವೇಳೆ ಸ್ವರ್ಣವಲ್ಲೀ ಶ್ರೀಗಳು ರಚಿಸಿದ ಯೋಗವಾಸಿಷ್ಠ ಪ್ರಥಮ ಸಂಪುಟ ಬಿಡುಗಡೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿಯಾಗಲಿದ್ದಾರೆ. ಐದೂ ದಿನಗಳ ಕಾಲ ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ಪ್ರಮುಖರಾದ ಜಿ. ವಿ. ಹೆಗಡೆ ಗೊಡವೆಮನೆ, ಆರ್. ಎಸ್. ಹೆಗಡೆ, ಆರ್. ಎನ್. ಹೆಗಡೆ, ಉಮಾಪತಿ ಭಟ್ ಮತ್ತಿಗಾರ, ಎಸ್. ಎನ್. ಭಟ್, ಸಿ. ಎಸ್. ಹೆಗಡೆ ಇತರರಿದ್ದರು.

ಖೋಟ್ :
ಸ್ವರ್ಣವಲ್ಲೀ ಸಂಸ್ಥಾನದಲ್ಲಿಯೇ ವೇದಾಧ್ಯಯನ, ವೇದಾಂತ ಅಧ್ಯಯನ ನಡೆಸಿರುವ ವೇ. ನಾಗರಾಜ ಭಟ್ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ಶ್ರೀಗಳು ನಿರ್ಧರಿಸಿದ್ದಾರೆ. ಸನ್ಯಾಸ ಸ್ವೀಕಾರದ ಬಳಿಕ ಅವರು ಮಠದಲ್ಲಿಯೇ ಉಳಿದು ಶ್ರೀಗಳ ಆಶೀರ್ವಾದದೊಂದಿಗೆ ವಿದ್ವತ್ ಅಧ್ಯಯನ ಮಾಡಲಿದ್ದಾರೆ.
ವಿ.ಎನ್.ಹೆಗಡೆ ಬೊಮ್ನಳ್ಳಿ, ಶ್ರೀಮಠದ ಅಧ್ಯಕ್ಷ

Share This
300x250 AD
300x250 AD
300x250 AD
Back to top