ಜೋಯಿಡಾ: ದಟ್ಟ ಕಾಡು, ಸದಾ ತುಂಬಿ ಹರಿಯುತ್ತಿರುವ ಕಾಳಿ ನದಿ, ಸಮೃದ್ಧ ವನ್ಯ ಸಂಪತ್ತಿನ ಹಾಗೂ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾದ ಜೋಯಿಡಾ ತಾಲೂಕು ನಾಡಿಗೆ ವಿದ್ಯುತ್ತನ್ನು ನೀಡುವ ಮೂಲಕ ಬೆಳಕನ್ನು ಪಸರಿಸಿದ ತಾಲೂಕೆಂಬ ಎಂಬ ಕೀರ್ತಿಯ ನಡುವೆಯೂ ತಾಲೂಕಿನ 168 ಮನೆಗಳಿಗೆ ವಿದ್ಯುತ್ ದೀಪದ ಬೆಳಕು ಇನ್ನೂ ಮರೀಚಿಕೆಯಾಗಿಯೇ ಉಳಿದಿರುವುದು ತಾಲೂಕಿನ ಕೀರ್ತಿಗೆ ಅಪಕೀರ್ತಿಯಾಗತೊಡಗಿದೆ.
ಜೋಯಿಡಾ ತಾಲೂಕಿನಲ್ಲಿ ತಾಲೂಕು ಪಂಚಾಯತ್ ವರದಿಯ ಪ್ರಕಾರ 126 ಮನೆಗಳಿಗೆ ವಿದ್ಯುತ್ ನೀಡಬೇಕಾಗಿದೆ, ಅದರಲ್ಲಿ 42 ಮನೆಗಳಿಗೆ ಅರಣ್ಯ ಇಲಾಖೆಯ ಕೆಲವೊಂದು ನಿಯಮಾವಳಿಗಳಿಂದಾಗಿ ವಿದ್ಯುತ್ ಸೌಕರ್ಯ ಒದಗಿಸುವ ಕೆಲಸ ನಿಂತಿದೆ ಎಂಬ ವರದಿ ಇದೆ. ಅದೇನೆ ಇರಲಿ, ತಾಲೂಕಿನಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿ 50 ವರ್ಷಗಳು ಕಳೆದರೂ ಈವರೆಗೆ ತಾಲೂಕಿನ 168 ಮನೆಗಳಿಗೆ ವಿದ್ಯುತ್ ಸೌಕರ್ಯ ದೊರೆಯದಿರುವುದು ಆಶ್ಚರ್ಯದ ಸಂಗತಿಯಾಗಿದೆ.
ತಾಲೂಕಿನ ನೂರಾರು ಮನೆಗಳಿಗೆ ವಿದ್ಯುತ್ ಇಲ್ಲ ಎನ್ನುವುದು ಬೇಸರದ ಸಂಗತಿ, ವಿದ್ಯುತ್ ಇಲ್ಲದೆ ಒಂದು ದಿನ ಇರಲು ಸಾಧ್ಯವಾಗುವುದಿಲ್ಲ. ಅಂತಹದರಲ್ಲಿ ತಾಲೂಕಿನ ಕೆಲ ಮನೆಯವರಿಗೆ ಇನ್ನೂ ವಿದ್ಯುತ್ ಇಲ್ಲ ಎನ್ನುವುದು ಸರ್ಕಾರಕ್ಕೆ ಕಪ್ಪು ಚುಕ್ಕೆ. ಕೂಡಲೇ ಎಲ್ಲಿ ವಿದ್ಯುತ್ ಇಲ್ಲ, ಅಲ್ಲಿ ವಿದ್ಯುತ್ ಸೌಕರ್ಯವನ್ನು ಒದಗಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತರಾದ ಟಿ.ಕೆ ದೇಸಾಯಿ ಮಂಗಳವಾರ ಜೋಯಿಡಾದಲ್ಲಿ ಮಾಧ್ಯಮದ ಮೂಲಕ ಸರಕಾರಕ್ಕೆ ಮನವಿಯನ್ನು ಮಾಡಿದ್ದಾರೆ.