ಹಳಿಯಾಳ : ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ವತಿಯಿಂದ ” ನಮ್ಮ ನಡೆ ಸ್ವ- ಉದ್ಯೋಗದ ಕಡೆ ” ಎಂಬ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿ.ಆರ್.ಡಿ ಎಮ್. ಟ್ರಸ್ಟ್ ನ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ಯಾಮ್ ಕಾಮತ್ ಹಸಿರು ನಿಶಾನೆ ತೋರಿಸುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಉಪಸ್ಥಿತರಿದ್ದು, ಶಿಕ್ಷಣ ಉದ್ಯೋಗಕ್ಕೆ ಮಾತ್ರ ಎಂಬ ಕಲ್ಪನೆಯಿಂದ ಹೊರಬರಬೇಕಾಗಿದೆ. ಶಿಕ್ಷಣ ಉನ್ನತವಾದ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ನುವುದನ್ನು ಅರಿತು ನಡೆದುಕೊಳ್ಳಬೇಕು. ಮುಖ್ಯವಾಗಿ ಯುವ ಜನತೆ ಉದ್ಯೋಗ ಸಿಗದೇ ಹತಾಶರಾಗುವುದರ ಬದಲು ಅವಕಾಶ, ಅರ್ಹತೆ, ಆಸಕ್ತಿ ಹಾಗೂ ಕೌಟುಂಬಿಕ ಪರಿಸ್ಥಿತಿಗೆ ಅನುಗುಣವಾಗಿ ಸ್ವಂತ ಉದ್ಯೋಗವನ್ನು ಕೈಗೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಸದೃಢ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿ.ಆರ್.ಡಿ.ಎಂ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ್ ಪ್ರಭು, ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಬಡ್ಡಿ, ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ್ ಚೌಹ್ವಾಣ್, ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಈ ಜಾಥಾವು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.