Slide
Slide
Slide
previous arrow
next arrow

ದಾಖಲೆಗಳಿಲ್ಲದೆ ಇತಿಹಾಸ ಬರವಣಿಗೆ ಸಲ್ಲ: ಡಾ.ಬಾಲಕೃಷ್ಣ ಹೆಗಡೆ

300x250 AD

ಶಿವಮೊಗ್ಗ: ದಾಖಲೆಗಳೆಂದರೆ ಇತಿಹಾಸ ಮತ್ತು ಸಮಾಜದ ನಡುವಿನ ಕೋನಶಿಲೆ ಇದ್ದಂತೆ. ದಾಖಲೆಗಳಿಲ್ಲದಿದ್ದರೆ ಇತಿಹಾಸವೆಂಬ ಇಡೀ ಸೌಧವೇ ಬಿದ್ದುಹೋಗುತ್ತದೆ. ದಾಖಲೆಗಳಿಲ್ಲದೆ ಇತಿಹಾಸ ಬರವಣಿಗೆ ಸಲ್ಲ ಎಂದು ಇತಿಹಾಸ ತಜ್ಞ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತದ ಸಂಚಾಲಕರಾದ ಡಾ.ಬಾಲಕೃಷ್ಣ ಹೆಗಡೆ ತಿಳಿಸಿದರು.

ಅವರು ಗದಗದ ಪಂಡಿತ ಪಂಚಾಕ್ಷರ ಗವಾಯಿಗಳವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜಿನ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗವು ರಾಜ್ಯ ಪತ್ರಾಗಾರ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಾಗಾರ ಕೂಟ ಮತ್ತು ಒಂದು ದಿನದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚರಿತ್ರೆಯ ಸಂಶೋಧನೆಗಳಲ್ಲಿ ದಾಖಲೆಗಳ ಪಾತ್ರ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ರಾಷ್ಟ್ರದ ಇತಿಹಾಸ ರಚನೆಯಲ್ಲಿ ಮತ್ತು ದೇಶದ ಪ್ರಗತಿಗೆ ಐತಿಹಾಸಿಕ ದಾಖಲೆಗಳು ಬಹು ಮುಖ್ಯ ಪಾತ್ರ ವಹಿಸುತ್ತಿವೆ ಎಂದ ಅವರು ದಾಖಲೆಗಳು, ಕಡತಗಳು, ಅಂದಿನ ಪತ್ರ ವ್ಯವಹಾರಗಳು ವರ್ಣಚಿತ್ರಗಳು, ವೀಡಿಯೋ-ಫೋಟೋಗಳು, ನ್ಯಾಯಾಲಯ ಕಲಾಪಗಳ ದಸ್ತವೇಜುಗಳು, ದಿನಚರಿಗಳು, ಸರ್ಕಾರದ ಆಡಳಿತಾತ್ಮಕ ಕಾಗದ ಪತ್ರಗಳು ಪತ್ರಾಗಾರ ಇಲಾಖೆಯಲ್ಲಿ ವ್ಯವಸ್ಥಿತವಾಗಿ ಸಂರಕ್ಷಿಸಲ್ಪಟ್ಟಿರುತ್ತವೆ. ಅವುಗಳನ್ನೇ ಅಧಿಕೃತ ದಾಖಲೆಗಳೆಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು. ಈ ದಾಖಲೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಡಾ.ಹೆಗಡೆ ಅಭಿಪ್ರಾಯಪಟ್ಟರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕುರ್ತಕೋಟಿ ಕಾಲೇಜಿನ ಡಾ.ವೈ.ಆರ್.ಬೇಲೇರಿ ಇತಿಹಾಸಕ್ಕೆ ಲಿಖಿತ ಹಾಗೂ ಮೌಖಿಕ ಆಕಾರಗಳ ಪಾತ್ರ ಕುರಿತು ಮಾತನಾಡಿ ಕೈಫಿಯತ್ತುಗಳು, ಮರಾಠಾ ಬಕೇರ್‌ಗಳು, ಹೆಳವರ ಪದ್ಯಗಳು, ತಾಳೆಗರಿ ಮೊದಲಾದವು ಪ್ರಮುಖ ಆಕರಗಳಾಗಿವೆ ಎಂದ ಅವರು ಶಿವಾಜಿ-ಮಲ್ಲಮ್ಮಾಜಿ ಸಮರೋತ್ಸವದ ಉದಾಹರಣೆಯನ್ನು ವಿವರಿಸಿದರು. ರೋಣ ಕಾಲೇಜಿನ ಡಾ.ಎಸ್.ಆರ್.ನದಾಫ್ ಅವರು ದಾಖಲೆ ಪತ್ರಗಳ ಸಂರಕ್ಷಣೆ ಹಾಗೂ ಸಂಗ್ರಹ ಕುರಿತು ಮಾತನಾಡಿದರು.

ಐತಿಹಾಸಿಕ ದಾಖಲೆಗಳ ಬಗ್ಗೆ ಮಾಹಿತಿ ಕೊಡಿ: ಮಂಜುಳಾ

300x250 AD

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಪತ್ರಾಗಾರದ ಧಾರವಾಡದ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಯಲಿಗಾರ, ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ ಪ್ರಕಟಿಸುವ ಸಂಶೋಧಕರಿಗೆ ರಾಜ್ಯ ಪತ್ರಾಗಾರ ಇಲಾಖೆ ಹಣಕಾಸಿನ ನೆರವು ನೀಡಲಿದ್ದು ಆಸಕ್ತ ಸಂಶೋಧಕರು ತಮ್ಮ ಪ್ರಕಟಣೆಗೆ ಮುಂದಾಗಬೇಕೆಂದು ವಿನಂತಿಸಿದರು. ತಮ್ಮ ಇಲಾಖೆಯು ರಾಜ್ಯದ ನಾಲ್ಕು ಕಡೆಗಳಲ್ಲಿ ಪ್ರಾದೇಶಿಕ ಕಚೇರಿಯನ್ನು ಹೊಂದಿದ್ದು ಬೆಳಗಾವಿ ವಿಭಾಗದ ಇಲಾಖೆ ಕಳೆದ 30 ವರ್ಷಗಳಿಂದ ಧಾರವಾಡದಿಂದ ಕಾರ್ಯ ನಿರ್ವಹಿಸುತ್ತಿದೆ. ಇತಿಹಾಸದ ಆಕರಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಅದನ್ನು ಸಾರ್ವಜನಿಕರಿಗೆ, ಸಂಶೋಧಕರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದೆ. ಐತಿಹಾಸಿಕ ದಾಖಲೆಗಳ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ಇಲಾಖೆ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ವಿಚಾರ ಸಂಕಿರಣವಲ್ಲದೆ ಹಣಕಾಸಿನ ಪ್ರೋತ್ಸಾಹವನ್ನೂ ನೀಡುತ್ತಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಸ್.ಯತ್ನಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಎಂ.ಗಾಣಿಗೇರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಬಿ.ಕೆ.ಪೂಜಾರ್, ಪ್ರೊ.ಮಹೇಶ ಗೋಲಪ್ಪನವರ್, ಪ್ರೊ.ಕೆ.ಎಂ.ಗರಗ, ಬಸಣ್ಣ ಕುಂಬಾರ್, ಸಂಶೋಧನಾ ವಿದ್ಯಾರ್ಥಿ ಕೃಷ್ಣ, ವಿ.ಎಸ್.ಹೊಸಮಠ , ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು.ನಂದಾ ದೇಸಾಯಿಪಟ್ಟಿ ಪ್ರಾರ್ಥಿಸಿದರು. ಪ್ರೊ.ಎಂ.ಆಯ್.ಜೋಬಾಳಿ ಸ್ವಾಗತಿಸಿದರು. ಡಾ.ವಿ.ಎ.ನಿಂಗೋಜಿ ವಂದಿಸಿದರು. ಡಾ.ಆರ್.ಎಸ್.ದಾನರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top