ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ, ಜನವರಿ 26 ರಂದು, ಕೇಂದ್ರ ಸರ್ಕಾರದ ರೈತ ಮತ್ತು ಅರಣ್ಯವಾಸಿಗಳ ವಿರೋಧಿ ನಡೆ ಖಂಡಿಸಿ ಶಿರಸಿಯಲ್ಲಿ ‘ಜನತಾ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್’ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ವೇದಿಕೆಯ ಕಾರ್ಯಾಲಯದಲ್ಲಿ ‘ಜನತಾ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪೆರೇಡ್’ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿ, ಕೇಂದ್ರ ಸರ್ಕಾರವು ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ರದ್ದುಪಡಿಸುವ ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿಗೆ, ಅರಣ್ಯ ಸಂರಕ್ಷಣಾ ಕಾಯಿದೆಗೆ ಅರಣ್ಯವಾಸಿಗಳ ಪರವಾಗಿ ರದ್ದುಪಡಿ ಮಾಡದೇ ಉದ್ಯಮೀಕರಣಕ್ಕೆ ಅರಣ್ಯ ಭೂಮಿ ನೀಡಲು ಕಾಯಿದೆ ಮಾರ್ಪಡಿಸಿದ್ದಕ್ಕೆ, ಅರಣ್ಯವಾಸಿಗಳ ಪರವಾಗಿ ರಾಷ್ಟ್ರೀಯ ಅರಣ್ಯ ನೀತಿ ರಚಿಸಲು ಆಗ್ರಹಿಸಿ, ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಒತ್ತಾಯಿಸಿ ಪ್ರಮುಖ ಐದು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಟ್ರ್ಯಾಕ್ಟರ್ ಪರೇಡ್ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಆರ್ ಕುಣಬಿ, ಮಹಾಬಲೇಶ್ವರ ಮಲ್ಲಾಪುರ, ಶಾಂತಾ ಟಿ, ಮಂಜುನಾಥ ಕುಣಬಿ, ನಾರಾಯಣ ಎಮ್ ಕಾರವಾರ, ವೆಂಕಟ್ರಮಣ ಬಿ, ನಾರಾಯಣ ವಿ ಕುಣಬಿ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಕ್ಕೆ ಆಗ್ರಹ:
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ, ಕರ್ನಾಟಕದ ಹಿಂದಿನ ಸರ್ಕಾರವು ಜ್ಯಾರಿಗೆ ತಂದಿದ್ದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಯ ಕಾನೂನುಗಳನ್ನು ಹೊಸದಾಗಿ ಬಂದಿರುವ ರೈತ, ಎ.ಪಿ.ಎಂ.ಸಿ, ಭೂ ಸುಧಾರಣಾ ಕಾಯಿದೆ, ರೈತ ವಿರೋಧಿ ಕಾನೂನುಗಳನ್ನು ಇಂದಿನ ರಾಜ್ಯ ಸರ್ಕಾರವು ಕೈಬಿಡಬೇಕೆಂದು ಈ ಸಂದರ್ಭದಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.