ಶಿರಸಿ: ಪ್ರಗತಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಪಿ.ಜಿ.ಎಸ್.ಎಸ್. ಕಾಲೇಜಿನ 9ನೇ ವಾರ್ಷಿಕೋತ್ಸವ ಜ.19 ರಂದು ಜರುಗಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಶಾಸಕರಾದ ಭೀಮಣ್ಣ ನಾಯ್ಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಮಾಡಲಾಗದ ಕೆಲಸವನ್ನು ಪಿ.ಜಿ.ಎಸ್.ಎಸ್. ಇನ್ಸ್ಟಿಟ್ಯೂಟ್ ಅದ್ಭುತವಾಗಿ ನಿರ್ವಹಿಸುತ್ತಿದೆ. ಈ ಹಿಂದೆ ಸಾಮಾನ್ಯ ನಾಗರಿಕನಾಗಿ ಈ ಕಾಲೇಜಿಗೆ ಭೇಟಿ ನೀಡಿದ್ದೆ. ಇಂದು ಶಾಸಕನಾಗಿ ಹೆಮ್ಮೆಯಿಂದ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುತ್ತಿದ್ದೇನೆ. ಮತ್ತು ಸರ್ಕಾರದಿಂದ ಸಾಧ್ಯವಾದ ಎಲ್ಲ ಸಹಾಯವನ್ನು ನೀಡುವ ಭರವಸೆಯನ್ನು ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೇ ವಹಿಸಿಮಾತನಾಡಿದ ಪ್ರಾಂಶುಪಾಲ ರಾಜು ಎನ್. ಕದಂ, ಪ್ರಗತಿ ಗ್ರಾಮೀಣ ಸಂಸ್ಥೆ 2015 ರಲ್ಲಿ ಪ್ರಾರಂಭವಾಗಿ 9 ನೇ ವರ್ಷಕ್ಕೆ ಕಾಲಿಡುತ್ತಿದ್ದು, ನಮ್ಮ ಸಂಸ್ಥೆಯ ಗುರಿಯಂತೆ ಗ್ರಾಮೀಣ ಭಾಗದ ಜನರಿಗೆ ಅದರಲ್ಲಿಯೂ ನಿರುದ್ಯೋಗ ಯುವಕ /ಯುವತಿಯರಿಗೆ ಕೌಶಲ್ಯಾಧರಿತ ಶಿಕ್ಷಣದ ಮೂಲಕ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಉದ್ಯೋಗ ನೀಡುತ್ತಿರುವಂತ ಶ್ರೇಷ್ಠ ಕೆಲಸವನ್ನು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳ ಮೂಲಕ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಕೈಗೊಳ್ಳಲಾಗುತ್ತಿದೆ. ಶೈಕ್ಷಣಿಕ ಚಟುವಟಿಕೆ ಅಂಗವಾಗಿ ಕೈಗಾರಿಕಾ ಪ್ರವಾಸ, ಫೈಯರ್ ಬ್ರಿಗೇಡ್, ಮತ್ತು 5ಸ್ಟಾರ್ ಹೊಟೇಲ್‌ಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಕೂಡಾ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಮತ್ತು 100 ಕ್ಕೂ ಹೆಚ್ಚು ಎಂ.ಎನ್.ಸಿ. ಕಂಪನಿಗಳಲ್ಲಿ ಹಾಗೂ 4 ಸ್ಟಾರ್ ಮತ್ತು 5ಸ್ಟಾರ್ ಹೊಟೇಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು. ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ನೂರಾರು ಗೃಹಿಣಿಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ, ಕಸೂತಿ ಕೆಲಸ, ಎಂಬ್ರಾಯ್ಡ್ರಿ ವರ್ಕ, ಮುಂತಾದ ಕೌಶಲ್ಯಗಳ ಮೂಲಕ ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಶ್ರೇಷ್ಠ ಕೆಲಸವನ್ನು ನಮ್ಮ ಸಂಸ್ಥೆ ಹಮ್ಮಿಕೊಂಡಿದೆ ಎಂದು ತಿಳಿಸಿದರು. ನಮ್ಮಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು 20 ಸಾವಿರದಿಂದ 1 ಲಕ್ಷದವರೆಗೂ ಸಂಬಳ ಕೂಡಾ ಪಡೆಯುತ್ತಿದ್ದು ಇಂದು ನಮ್ಮ ಈ ಕಾರ್ಯಕ್ರಮಕ್ಕೆ ಹಾಜರಿದ್ದು ಈ ಕಾಲೇಜಿನ ಶೋಭೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ ಎಂದರು. ಈ ವರ್ಷ ಗ್ಲೋಬಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ವರ್ಷದಿಂದ ಡಿಪ್ಲೋಮ್ ಇನ್ ಏವಿಯೇಶನ್ ಟೆಕ್ನೊಲೊಜಿ ಪ್ರಾರಂಭಿಸಿದ್ದು ಬರುವ ವರ್ಷದಿಂದ ಇಂಟೀರಿಯರ್ ಡಿಸೈನಿಂಗ್ ಕೋರ್ಸ, ಪ್ರಾರಂಭಿಸಲಾಗುವುದು ಎಂದರು. ಸಾಮಾನ್ಯ ಪದವಿ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೂ ತರಬೇತಿ ನೀಡಿ ಉದ್ಯೋಗ ನೀಡುವ ಉದ್ದೇಶದಿಂದ ಈ ಸಂಸ್ಥೆಯು ಜನ್ಮತಾಳಿದೆ ಎಂದು ತಿಳಿಸಿದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ಟ, ಈ ರೀತಿ ಕೌಶಲ್ಯಾಧರಿತ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿರುವುದು ಸಂತೋಷದ ಸಂಗತಿ. ನಾವೂ ಕೂಡಾ ಈ ರೀತಿಯ ಶಿಕ್ಷಣಕ್ಕೆ ಬೆಂಬಲಿಸುತ್ತಿದ್ದು ಪ್ರಗತಿ ಗ್ರಾಮೀಣ ಶಿಕ್ಷಣ ಸಂಸ್ಥೆಗೂ ಕೂಡ ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯ ಮೂಲಕ ಬೆಂಬಲಿಸುವುದಾಗಿ ತಿಳಿಸಿದರು. ಇನ್ನೋರ್ವ ಅತಿಥಿಯಾದ ಅನಂತಮೂರ್ತಿ ಹೆಗಡೆ, ನೀವು ಕೇವಲ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡುತ್ತಿಲ್ಲ ಅವರ ಕುಟುಂಬಕ್ಕೆ ಕೂಡ ಅನ್ನ ಕೊಡುವಂತ ಶ್ರೇಷ್ಠ ಕೆಲಸವನ್ನು ಮಾಡುತ್ತಿದ್ದೀರಿ ಎಂದು ತಿಳಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರೋತ್ಸಾಹವನ್ನು ಕೊಡುವ ಭರವಸೆಯನ್ನು ನೀಡುತ್ತಾ ಈ ಕೆಲಸದಲ್ಲಿ ಸಾಧಕರಾಗಿ ರಾಜು ಎನ್. ಕದಂಬ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಅವರ ಈ ಕೆಲಸದಲ್ಲಿ ಇನ್ನು ಹೆಚ್ಚಿನ ಶ್ರೇಯಸ್ಸು ಸಿಗಲಿ ಎಂದು ಹಾರೈಸುತ್ತಾ ರಾಜು ಎನ್. ಕದಂಬರವರನ್ನು ಸನ್ಮಾನಿಸಿದರು.
ಶಿರಸಿ ಪಟ್ಟಣದ ಪ್ರತಿಭಾನ್ವಿತೆ ಮತ್ತು ಹಲವು ಕಲಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತ್ತೀಚೆಗೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಪ್ರಶಸ್ತಿ ಭಾಜನರಾದ ಶ್ರೀಮತಿ ರೇಖಾ ಭಟ್ಟ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡುತ್ತಾ ತಾನು ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು ಈ ಕಾಲೇಜಿನ ಎಲ್ಲ ಚಟುವಟಿಕೆಗಳ ಬಗ್ಗೆ ಹೆಮ್ಮೆ ಇರುತ್ತಿದ್ದು ಅತಿ ಶೀಘ್ರದಲ್ಲಿಯೇ ಈ ಸಂಸ್ಥೆ ತನ್ನ ಸ್ವಂತ ಸುಸರ್ಜಿತ ಕಟ್ಟಡ ಮತ್ತು ಸೌಕರ್ಯವನ್ನು ಹೊಂದಲಿ ಎಂದು ಹಾರೈಸಿದರು. ಇನ್ನೋರ್ವ ಅತಿಥಿಗಳಾದ ಶ್ರೀ ಮಾರಿಕಾಂಬಾ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಾಲಚಂದ್ರ ಭಟ್ ಕಾಲೇಜಿನ ಚಟುವಟಿಕೆಗಳನ್ನು ವೀಕ್ಷಿಸಿ ಹೆಮ್ಮೆಪಟ್ಟು ಕಾಲೇಜಿನಲ್ಲಿ ನಡೆಯುವ ವಾಸ್ತವಿಕ ಚಟುವಟಿಕೆಗಳನ್ನು ನೋಡಿ ಆನಂದಿಸಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕೂಡ ಈ ಕಾಲೇಜಿನಲ್ಲಿ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಹೋಗಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು.
ರಾಜ್ಯದ ಪ್ರಖ್ಯಾತ ಮೊಟಿವೇಶನಲ್ ಸ್ವೀಕರ್ ಆದ ರಫೀಕ ಮಾಸ್ಟರ್ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪುಸ್ತಕವನ್ನು ಓದಿದರೆ ಎಂದಿಗೂ ತಲೆ ಎತ್ತಿ ಬದುಕಬಹುದು ಆದರೆ ಮೊಬೈಲ್ ಗೀಳನ್ನು ಹಿಡಿಸಿಕೊಂಡರೆ ಜೀವನ ಪೂರ್ತಿ ತಲೆ ತಗ್ಗಿಸಿ ಬದುಕಬೇಕಾಗುತ್ತದೆ ಎನ್ನುವ ಹಿತವಚನವನ್ನು ನುಡಿದರು. ಧ್ರುವತಾರೆ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಎಚ್. ಗಣೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪರಿಚಾರಕಿಯಾದ ಶಾಂತಿನಗರದ ಮಹಿಳೆ ವಿಜಯಾ ಗೌಳಿ ಇವರಿಗೆ ಸನ್ಮಾನಿಸಿರುವಂತ ಕಾರ್ಯಕ್ರಮ ಗುರುತಿಸುವಂತಾಗಿತ್ತು.
ಕಂಪ್ಯೂಟರ್ ಶಿಕ್ಷಕಿಯಾದ ಅಶ್ವಿನಿ ವರದಿ ವಾಚಿಸಿದರು, ಫ್ಯಾಶನ್ ಡಿಸೈನರ್ ವಿದ್ಯಾರ್ಥಿನಿಯಾದ ಕು. ಭಾವನಾ ಕಾರ್ಯಕ್ರಮವನ್ನು ನಿರೂಪಿಸಿದರು. ಹೊಟೇಲ್ ಮೆನೇಜಮೆಂಟ್ ಶಿಕ್ಷಕಿಯಾದ ನೂರಜಹಾನ್ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಪ್ಯಾಶನ್ ಡಿಸೈನರ್ ಪ್ಯಾಕಲ್ಟಿಯಾದ ಶ್ರೀಮತಿ ವೈಷ್ಣವಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಶಿಕ್ಷಕ ವೃಂದದವರು, ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕರು, ಮತ್ತು ಈಗ ಅಧ್ಯಯನ ಮಾಡುತ್ತಿರುವ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದ 2ನೇ ಹಂತದ ಅಂಗವಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಮನರಂಜನಾ ಕಾರ್ಯಕ್ರಮ ಪ್ರಸ್ತುತಗೊಂಡಿತ್ತು.