ಬನವಾಸಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ನಡೆದ ಹೊಲಿಗೆ ತರಬೇತಿ ಶಿಬಿರದ ಪ್ರಮಾಣ ಪತ್ರ ವಿತರಣೆ ಹಾಗೂ ಸಿರಿಧಾನ್ಯ ಮಾಹಿತಿ ಕಾರ್ಯಕ್ರಮ ಇಲ್ಲಿನ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಗುರುವಾರ ಜರುಗಿತು.
ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಸಂಸಾರವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಮಹಿಳೆಯ ಮೇಲಿದೆ. ಅದಕ್ಕಿಂತ ಹೆಚ್ಚಾಗಿ ಪುರುಷರಂತೆ ಶೈಕ್ಷಣಿಕ, ವಿಜ್ಞಾನ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮುಕ್ತವಾಗಿ ಮುನ್ನಡೆದುಕೊಂಡು ಹೋಗುವ ಅವಕಾಶ ಇದೆ. ಹಾಗಾಗಿ ಮಹಿಳೆಯರು ಯಾವುದೇ ಸಂಕೋಚವಿಲ್ಲದೆ ಪುರುಷರಂತೆ ದುಡಿಯುವಂತಾಗಬೇಕು. ಈ ಉದ್ದೇಶಕ್ಕಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಇಂತಹ ಹಲವಾರು ರೀತಿಯ ಶಿಬಿರಗಳನ್ನು ಗ್ರಾಮಾಭಿವೃದ್ದಿ ಯೋಜನೆಯು ಹಮ್ಮಿಕೊಳ್ಳುತ್ತಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಬನವಾಸಿ ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ, ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್, ಸಿರಿ ಮೇಲ್ವಿಚಾರಕ ಚೇತನ, ವಲಯ ಮೇಲ್ವಿಚಾರಕ ಪಿ. ನಾಗರಾಜ, ಮಹಿಳಾ ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಲ್ಲಿಕಾ ಹಾಗೂ ವಲಯದ ಸೇವಾ ಪ್ರತಿನಿಧಿಗಳು, ಹೊಲಿಗೆ ತರಭೇತಿಯ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.