Slide
Slide
Slide
previous arrow
next arrow

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ 9.79 ಲಕ್ಷ ರೂಪಾಯಿ ಖರ್ಚು: ಪಿ.ಆರ್.ನಾಯ್ಕ ಮಾಹಿತಿ

300x250 AD

ಹೊನ್ನಾವರ: ತಾಲೂಕಿನ ಮೂಡ ಗಣಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಮೂಲಗಳಿಂದ 9.24 ಲಕ್ಷ ರೂಪಾಯಿ ಜಮಾ ಆಗಿದ್ದು, 9.79 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ತಿಳಿಸಿದರು.

ತಾಲೂಕ ಪಂಚಾಯತ್ ಸಭಾಭವನದಲ್ಲಿ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಸಮ್ಮೇಳನದ ಖರ್ಚು ವೆಚ್ಚವನ್ನು ಮೂಲ ರಶೀದಿಯೊಂದಿಗೆ ಮಂಡಿಸಿದರು. ಪ್ರತಿಯೊಂದು ಖರ್ಚಿನ ವಿವರವನ್ನು ನೀಡುತ್ತಾ ಅದಕ್ಕೆ ಸಂಬಂಧಿಸಿದ ರಸೀದಿಯನ್ನು ಇಟ್ಟಿರುವುದಾಗಿ ತಿಳಿಸಿದರು. ಸಮ್ಮೇಳನದಲ್ಲಿ ಭಾಗವಹಿಸಿದ ಹಿರಿ-ಕಿರಿಯ ಸಾಹಿತಿಗಳಿಗೆ ಗೌರವಧನ, ಪ್ರಯಾಣ ವೆಚ್ಚ, ಮೆರವಣಿಗೆ ಸಂದರ್ಭದಲ್ಲಿ ಭಾಗವಹಿಸಿದ ಕಲಾತಂಡಗಳಿಗೆ ಗೌರವಧನ, ಬ್ಯಾನರ್, ಬಾವುಟ, ಬಂಟಿಂಗ್ಸ್, ಶಾಲು, ಸನ್ಮಾನಿತರಿಗೆ ಗೌರವ ಧನ,ಪೆಂಡಲ್, ವೇದಿಕೆ, ಪುಸ್ತಕ ಮಳಿಗೆ ಮುಂತಾದವುಗಳಿಗೆ ನಿಗದಿಪಡಿಸಿದ ದರದಂತೆ ಖರ್ಚು ವೆಚ್ಚ ಬರಿಸಲಾಗಿದೆ. ಎರಡು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಊಟ, ಉಪಹಾರ ಮತ್ತು ತಂಪು ಪಾನಿಯ ವ್ಯವಸ್ಥೆಯನ್ನು ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ನೀಡಿರುತ್ತಾರೆ. ಆಗಮಿಸಿದ ಸಾಹಿತಿಗಳಿಗೆ ಗೌತಮಿ ಶೆಟ್ಟಿಯವರು ಬ್ಯಾಗನ್ನು ಉಚಿತವಾಗಿ ನೀಡಿರುತ್ತಾರೆ. ತಾಲೂಕಿನ ವಿವಿಧ ಇಲಾಖೆಯವರು, ದಾನಿಗಳು ಹಾಗೂ ಶಿಕ್ಷಕರಿಂದ ದೇಣಿಗೆ ಸಂಗ್ರಹಿಸಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರನ್ನು ಅಭಿನಂದಿಸಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಎಲ್ಲಾ ಕನ್ನಡದ ಮನಸ್ಸುಗಳು ಭಾಗವಹಿಸುವುದರಿಂದ ಸಮ್ಮೇಳನ ಯಶಸ್ವಿಯಾಗಿ ನಡೆದಿರುತ್ತದೆ. ಲೆಕ್ಕಪತ್ರವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಶಿಸ್ತು ಬದ್ಧವಾಗಿ ಇಡಲಾಗಿದೆ. ಜಮಾ ಖರ್ಚು ಗಳನ್ನು ಲೆಕ್ಕಪರಿಶೋಧಕರಿಂದ ಆಡಿಟ್ ಮಾಡಿಸಿದ ನಂತರ ಸರ್ವ ಸದಸ್ಯರ ಸಭೆ ಕರೆದು ಮಂಡಿಸಲಾಗುತ್ತದೆ. ಸ್ಮರಣ ಸಂಚಿಕೆಗೆ ಜಾಹಿರಾತು ಸಂಗ್ರಹಿಸಿ ಕೊರತೆ ಹಣ ಸರಿದೂಗಿಸಲು ಪ್ರಯತ್ನಿಸಲಾಗುವುದು ಎಂದರು.

300x250 AD

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ನಾಯ್ಕ್ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಪ್ರತಿಯೊಂದು ಕನ್ನಡದ ಮನಸ್ಸುಗಳು ಕಾರಣ. ನಾವು ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತನವಿದ್ದರೆ ಹಾಗೂ ಉತ್ತಮ ಕಾರ್ಯ ಸಾಧನೆಯ ಸಂಕಲ್ಪ ತೊಟ್ಟರೆ ಇಂತಹ ಸಮ್ಮೇಳನಗಳು ಯಶಸ್ವಿಯಾಗಲು ಸಾಧ್ಯ ಎಂದರು. ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಸೇಫ್ ಸ್ಟಾರ್ ಸಂಸ್ಥೆಯ ಮುಖ್ಯಸ್ಥ ಜಿ.ಜಿ. ಶಂಕರ, ಹಿರಿಯ ಸಾಹಿತಿ ಎನ್. ಆರ್. ನಾಯಕ, ನೌಕರರ ಸಂಘದ ಅಧ್ಯಕ್ಷ ಆರ್. ಟಿ. ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ. ಹೆಗಡೆ,ಜಿಲ್ಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ಮಹೇಶ ಭಂಡಾರಿ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಪ್ರಮುಖರಾದ ಎಲ್.ಎಮ್. ಹೆಗಡೆ, ಸತೀಶ ನಾಯ್ಕ,ಪ್ರಕಾಶ ನಾಯ್ಕ, ಜನಾರ್ಧನ ಕಾಣ ಕೋಣಕರ್, ದೀಪಕ್ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ತಾಲೂಕಾ ಘಟಕದ ಅಧ್ಯಕ್ಷ ಎಸ್. ಎಚ್. ಗೌಡ ಸ್ವಾಗತಿಸಿದರೆ, ಜಿಲ್ಲಾ ಕೋಶಾಧ್ಯಕ್ಷ ಮುತು೯ಜಾ ಹುಸೇನ್ ವಂದಿಸಿದರು.

Share This
300x250 AD
300x250 AD
300x250 AD
Back to top