ದಾಂಡೇಲಿ: ಸರಿ ಸಮಾರು 50 ವರ್ಷಗಳಷ್ಟು ಹಳೆಯದಾದ ದಾಂಡೇಲಿ ನಗರದ ಕುಳಗೆ ರಸ್ತೆಯಲ್ಲಿರುವ ಸೇತುವೆ ಇದೀಗ ಅಪಾಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿದೆ. ಕಾಲಕಾಲಕ್ಕೆ ಸೇತುವೆಯನ್ನು ಸಮರ್ಪಕ ನಿರ್ವಹಣೆ ಮಾಡದೇ ಇರುವುದರಿಂದ ಸೇತುವೆಯ ತಡೆಗೋಡೆಯಲ್ಲಿ ಬಿರುಕು ಮೂಡಿದೆ. ಇದೇ ಸೇತುವೆಯ ಮೇಲ್ಗಡೆಯಿಂದ ಸಾರ್ವಜನಿಕರು, ಮಕ್ಕಳೆನ್ನದೇ ನದಿಯಲ್ಲಿರುವ ಮೊಸಳೆ, ಮೀನುಗಳನ್ನು ವೀಕ್ಷಿಸುವುದು ಸಹಜವಾದರೇ, ಇನ್ನು ಸಾಕಷ್ಟು ಜನ ಸೇತುವೆಯ ತಡೆಗೋಡೆಗೆ ಒರಗಿ ಮೀನಿಗಾಗಿ ಗಾಳ ಹಾಕುವುದನ್ನು ನೋಡುತ್ತಿದ್ದೇವೆ. ಇದೇ ತಡೆಗೋಡೆಯ ಹತ್ತಿರ ಸಂಜೆ ಹೊತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಾರೆ.
ಆದರೆ ಈ ಸೇತುವೆಯ ತಡೆಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯವಂತಿಲ್ಲ. ಬಹಳಷ್ಟು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ವಿಶಾಲ ಸೇತುವೆಯನ್ನು ಸಂಬಂಧಪಟ್ಟ ಇಲಾಖೆಯವರು ದುರಸ್ತಿ ಮಾಡುವ ಮೂಲಕ ಸೇತುವೆಯನ್ನು ರಕ್ಷಿಸುವುದರ ಜೊತೆಗೆ ಆಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕಾಗಿದೆ.
ಸೇತುವೆಯ ತಡೆಗೋಡೆ ಸೇರಿದಂತೆ ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಬೇಕು ಮತ್ತು ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಸ್ಥಳೀಯ ನಿವಾಸಿಯೂ ಆಗಿರುವ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಚೆನ್ನಬಸಪ್ಪ ಮರುಗೋಡವರು ಗುರುವಾರ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.