ಕಾರವಾರ: ನಗರದ ಕೆಲವು ರಸ್ತೆಗಳು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತದ ಹಾಟ್‌ಸ್ಪಾಟ್‌ಗಳಾಗಿದ್ದು, ಅಮಾಯಕರ ಜೀವ ಬಲಿ ತೆಗೆದುಕೊಳ್ಳುತ್ತಿದೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಹಾದುಹೋದ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರೋಡ್ ಅಪಾಯಕಾರಿಯಾಗಿದ್ದು, ಡಾ. ಕಮಲಾಕರ ರಸ್ತೆ-ಬೀಚ್ ರೋಡ್, ರಾಷ್ಟ್ರೀಯ ಹೆದ್ದಾರಿ ಕೂಡುವುದರಿಂದ ಮೂರು ಕಡೆಯಿಂದ ವಾಹನಗಳ ಸವಾರರು ವೇಗವಾಗಿ ಬರುತ್ತಾರೆ. ಬೀಚ್ ರೋಡ್ ಕಡೆಯಿಂದ ಬರುವವರಿಗೆ ಫ್ಲೈಓವರ್‌ನ ಬೃಹತ್ ಪಿಲ್ಲರ್‌ಗಳು ಇರುವುದರಿಂದ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನ ಗೋಚರವಾಗುವುದಿಲ್ಲ. ಸರ್ವಿಸ್ ರಸ್ತೆಯಿಂದ ಬರುವವರೂ ಬೀಚ್ ರೋಡ್ ಕಾಣುವುದಿಲ್ಲ. ಇತ್ತ ಕಮಲಾಕರ ರಸ್ತೆಯಿಂದ ಬರುವವರಿಗೆ ಜಿಲ್ಲಾಧಿಕಾರಿ ಕಚೇರಿಯ ಆವಾರಗೋಡೆ ಅಡ್ಡವಾಗುವುದರಿಂದ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನ ಕಾಣುವುದಿಲ್ಲ. ಹೀಗಾಗಿ ಅಪಘಾತಗಳು ನಡೆಯುತ್ತಿವೆ. ಸರ್ವಿಸ್ ರಸ್ತೆಗೆ ರೋಡ್ ಹಂಪ್ ಹಾಕಿ ವಾಹನಗಳ ವೇಗ ಕಡಿಮೆಯಾಗುವಂತೆ ಮಾಡಬೇಕಿದೆ. ಈಗಾಗಲೇ ಹಲವು ಅಪಘಾತಗಳು ಈ ಸರ್ಕಲ್‌ನಲ್ಲಿ ಆಗಿದ್ದು, ಅದೃಷ್ಠವಶಾತ್ ಯಾರೂ ಜೀವ ಕಳೆದುಕೊಂಡಿಲ್ಲ. ರಾಹೆ 66ರಲ್ಲಿ ಐಆರ್‌ಬಿ ಕಂಪೆನಿ ಚತುಷ್ಪಥ ಕಾಮಗಾರಿ ನಡೆಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಈ ರಸ್ತೆ ಬರುತ್ತಿದ್ದರೂ ನಗರ ಭಾಗವಾದ್ದರಿಂದ ನಗರಸಭೆಯವರು ಅಪಘಾತ ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ.
ಗೀತಾಂಜಲಿ ಸರ್ಕಲ್‌ನಿಂದ ಮುಂದೆ ಹಬ್ಬುವಾಡ ರಸ್ತೆಯನ್ನು ಅಗಲೀಕರಣ ಮಾಡಿ ಕಾಂಕ್ರೀಟ್ ಹಾಕಲಾಗಿದ್ದು, ರಸ್ತೆ ಮಧ್ಯೆ ಡಿವೈಡರ್ ಅಳವಡಿಸಲು ಜಾಗ ಬಿಡಲಾಗಿದೆ. ಹಬ್ಬುವಾಡದಿಂದ ನಗರದ ಕಡೆಗೆ, ನಗರದಿಂದ ಹಬ್ಬುವಾಡ ಕಡೆಗೆ ತೆರಳುವ ವಾಹನಗಳು ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುವ ವಾಹನ ಗಮನಿಸದೇ ಅಪಘಾತವಾಗುತ್ತಿದೆ. ಇದೇ ರಸ್ತೆಯಲ್ಲಿ ಕಳೆದ ಶುಕ್ರವಾರ ಲಾರಿಯ ಚಾಲಕ ಓವರ್‌ಟೇಕ್ ಮಾಡುವ ಬರದಲ್ಲಿ ಎದುರಿನಿಂದ ಬಂದ ವಾಹನ ಗಮನಿಸಿದೇ ಏಕಾಏಕಿ ಲಾರಿಯನ್ನು ಎಡಕ್ಕೆ ತಿರುಗಿಸಿದ್ದು, ಲಾರಿ ಪಕ್ಕದಲ್ಲೇ ಸಾಗುತ್ತಿದ್ದ ಶಿಕ್ಷಕ ಉಮೇಶ ಗುನಗಿ ಎಂಬಾತನಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದು, ಪ್ರಾಣಕಳೆದುಕೊಂಡಿದ್ದಾರೆ. ಡಾ.ಪಿಕಳೆ ರಸ್ತೆಯ ಸರ್ಕಲ್ ಕೂಡಾ ಅಪಾಯಕಾರಿಯಾಗಿದ್ದು, ಕೋಡಿಬಾಗದಿಂದ ಬರುವ, ಪಿಕಳೆ ರಸ್ತೆಯಿಂದ ಬರುವ ಹಾಗೂ ಹೂವಿನ ಚೌಕ ಕಡೆಯಿಂದ ಬರುವ ವಾಹನಗಳ ಸವಾರರು ಅಪಾಯ ಎದುರಿಸುವಂತಾಗಿದೆ. ಕೊಡಿಬಾಗದಿಂದ ಬರುವ ವಾಹನ ಬಲಕ್ಕೆ ಪಿಕಳೆ ರಸ್ತೆಗೆ, ಪಿಕಳೆ ರಸ್ತೆಯಿಂದ ಬಂದ ವಾಹನ ಬಲಕ್ಕೆ ಹೂವಿನ ಚೌಕದ ಕಡೆಗೆ ತಿರುಗುವಾಗ ತಮ್ಮ ಚಾಲಕನ ಬದಿಯನ್ನು ಬಿಟ್ಟು ಪಕ್ಕಕ್ಕೆ ವಾಹನ ತಿರುಗಿಸುತ್ತಾರೆ. ಹೂವಿನ ಚೌಕದಿಂದ ಬಂದ ವಾಹನ ನೇರವಾಗಿ ಕೋಡಿಬಾಗದ ಕಡೆಗೆ ಸಾಗುತ್ತವೆ. ಹೀಗಾಗಿ ಅಪಘಾತವಾಗುವ ಸಾಧ್ಯತೆಯಿದೆ. ಈ ಸರ್ಕಲ್ ಮಧ್ಯೆ ಚೌಕಿಯ ಅವಶ್ಯಕತೆಯಿದೆ. ಎಲ್ಲಾ ರಸ್ತೆಯಿಂದ ಬಂದ ವಾಹನಗಳು ಸುತ್ತುವರೆಯಬೇಕಾದರೆ ಅಪಾಯ, ಅಪಘಾತ ಆಗುವುದಿಲ್ಲ. ಈ ಎಲ್ಲಾ ಮೂರು ರಸ್ತೆಗಳಲ್ಲಿನ ಅಪಘಾತ ತಪ್ಪಿಸಲು ನಗರಸಭೆಯಿಂದ ಅಗತ್ಯ ಕ್ರಮವಹಿಸಬೇಕಿದೆ.