ಕಾರವಾರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವತಿಯಿಂದ ಜನವರಿ 22 ರಿಂದ 31 ರವರೆಗೆ ಶಿರಸಿಯ ಸರಕಾರಿ ಉರ್ದು ಪ್ರೌಢಶಾಲೆ, ಕುಮಟಾದ ಗಿಬ್ಸ್ ಬಾಲಕರ ಪ್ರೌಢಶಾಲೆ ಹಾಗೂ ಕಾರವಾರದ ಸರಕಾರಿ ಪ್ರೌಢ ಶಾಲೆಗಳಲ್ಲಿ ವಾಣಿಜ್ಯ ಪರೀಕ್ಷೆಗಳು ನಡೆಯಲಿವೆ.
ಸದರಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಬೇಕಾಗಿರುವುದರಿಂದ ,ವಾಣಿಜ್ಯ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ತರಹದ ಅವ್ಯವಹಾರ ಕಾನೂನು ಬಾಹಿರ ಚಟುವಟಿಕೆಗಳು ಅಥವಾ ಶಾಂತತಾ ಭಂಗ ಆಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸಭೆ ಸಮಾರಂಭಗಳನ್ನು ನಡೆಯುತ್ತಿದ್ದಲ್ಲಿ ಧ್ವನಿವರ್ಧಕಗಳನ್ನು ತಡೆಯುವ ನಿಟ್ಟಿನಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಪರೀಕ್ಷಾ ಸಮಯದಿಂದ ಪರೀಕ್ಷಾ ಅವಧಿ ಮುಗಿಯುವವರೆಗೆ ಸಿ.ಆರ್.ಪಿ.ಸಿ ಕಾಯ್ದೆ ಕಲಂ 144 ರಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿಷೇಧಾಜ್ಞೆಯನ್ನು ಹೊರಡಿಸಿರುತ್ತಾರೆ.
ಸದರಿ ಅವಧಿಯಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿರುವ ಝೆರಾಕ್ಸ್ ಅಂಗಡಿ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದ್ದು, ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಇಲೆಕ್ಟ್ರಾನಿಕ್ಸ್ ಅಂದರೆ, ಮೊಬೈಲ್ ಫೋನಗಳು, ಸ್ಮಾರ್ಟ ವಾಚ್, ವೈರ್ ಲೆಸ್/ ಬ್ಲೂಟೂತ್, ಇಯರ್ ಹೆಡ್ ಫೋನ್ ಗಳನ್ನು ತರಲು ನಿಷೇಧಿಸಲಾಗಿದೆ.