ಶಿರಸಿ :ತಾಲೂಕಿನ ಹಳ್ಳಿಕಾನು ಗ್ರಾಮದ ಶ್ರೀ ಭೂತೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಭಕ್ತಿ, ಸಂಭ್ರಮದಿಂದ ಜರುಗಿತು. ಕಾರ್ಯಕ್ರದಲ್ಲಿ ಶಾಸಕ ಭೀಮಣ್ಣ ನಾಯ್ಕರಿಗೆ ತುಲಾಭಾರ ನೆರವೇರಿಸಿ ಗ್ರಾಮಸ್ಥರು ಹರಕೆಯನ್ನು ತೀರಿಸಿದರು.
ಪ್ರತಿ ವರ್ಷವೂ ಕುಳವೆ ಗ್ರಾಮ ಪಂಚಾಯತದ ಹಳ್ಳಿಕಾನು ಗ್ರಾಮದಲ್ಲಿ ಸಂಕ್ರಾತಿಯ ನಿಮಿತ್ತ 1001 ಸತ್ಯ ನಾರಾಯಣ ಕಥೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ಈ ಬಾರಿಯೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದವನ್ನು ಪಡೆದುಕೊಂಡರು.
ತುಲಾಭಾರ : ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಭೀಮಣ್ಣ ನಾಯ್ಕ ಶಾಸಕರಾದಲ್ಲಿ ಅವರಿಗೆ ತುಲಾಭಾರ ನಡೆಸುವುದಾಗಿ ಹಳ್ಳಿಕಾನ ಗ್ರಾಮಸ್ಥರು ಹರಕೆ ಹೊತ್ತಿದ್ದರು. ಅದರ ಪ್ರಕಾರ ಶಾಸಕ ಭೀಮಣ್ಣ ನಾಯ್ಕ ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಲಾಭಾರವನ್ನು ನಡೆಸಿಕೊಟ್ಟರು. ಕಾಯಿ ಮತ್ತು ಅಡಿಕೆಯಿಂದ ತುಲಾಭಾರ ನಡೆಸಿ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು, ಭೀಮಣ್ಣ ನಾಯ್ಕ ಅಭಿಮಾನಿಗಳು ಶ್ರೀ ದೇವರ ಹರಕೆಯನ್ನು ತೀರಿಸಿದರು.
ಕಾರ್ಯಕ್ರಮವು ಕಳೆದ 51 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಅತ್ಯಂತ ದೈವಿ ಕ್ಷೇತ್ರವಾಗಿಯೂ ಶ್ರೀ ಭೂತೇಶ್ವರ ದೇವರ ಸನ್ನಿಧಿ ಗುರುತಿಸಿಕೊಂಡಿದೆ. ಸಾವಿರಾರು ಭಕ್ತರು ಪೂಜೆ ಸಲ್ಲಿಸಿ, ಅನ್ನ ಪ್ರಸಾದ ಸ್ವೀಕರಿಸಿ ತೆರಳುವುದು ವಾಡಿಕೆಯಾಗಿದೆ.
ಇನ್ನು ಸಂಕ್ರಾತಿಯ ನಿಮಿತ್ತ ಧಾರ್ಮಿಕ ಕಾರ್ಯಕ್ರಮದ ನಂತರ ರಾತ್ರಿ ಹಳ್ಳಿಕಾನ ಗ್ರಾಮಸ್ಥರಿಂದ ‘ತವರು ಮನೆ ಕುಂಕುಮ ‘ ಎಂಬ ಸುಂದರ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. ಅತ್ಯಂತ ಯಶಸ್ವಿಯಾಗಿ ನಡೆಯಿತು.
ಹಳ್ಳಿಕಾನ ಶ್ರೀ ಭೂತೇಶ್ವರ ದೇವರ ಸನ್ನಿಧಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಶಾಸಕನಾಗಿ ಮೊದಲ ಬಾರಿಗೆ ಬಂದು, ತುಲಾಭಾರ ಹರಕೆ ತೀರಿಸಿರುವುದು ನನ್ನ ಅದೃಷ್ಟ. ದೇವರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ.– ಭೀಮಣ್ಣ ನಾಯ್ಕ, ಶಾಸಕ