ಕುಮಟಾ : ಹಲವಾರು ಸಾಧಕರನ್ನು ಸೃಷ್ಟಿಸಿದ ಶಾಲೆ ಹಂದಿಗೋಣ ಶಾಲೆ. ಇಂತಹ ಶಾಲೆಯ ಶತಮಾನೋತ್ಸವದ ಉದ್ಘಾಟನೆ ನನ್ನ ಭಾಗ್ಯ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಧಕರನ್ನು ಬೆಳೆಸಿದ ಸಾರ್ಥಕತೆಯು ಈ ಶಾಲೆಗಿದ್ದು, ನಮ್ಮ ಶಾಲೆ ಎಂದು ಹೆಮ್ಮೆಯಿಂದ ಬಂದಿರುವ ಜನರ ಭಾವನೆಯನ್ನು ಬೆಸೆದಿರುವ ಕಾರ್ಯಕ್ರಮ ಇದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂದಿಗೋಣದಲ್ಲಿ ನಡೆದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆ ಹಾಗೂ ದೇವಾಲಯಗಳು ಅಭಿವೃದ್ಧಿಯಾದಲ್ಲಿ ಆ ಸ್ಥಳದಲ್ಲಿ ದೇವರೇ ಬಂದು ನೆಲೆಸುತ್ತಾನೆ. ಹೀಗಾಗಿ ನಾನು ಎಲ್ಲಿಯೇ ಹೋದರೂ ಶಾಲೆಗಳಿಗೆ ಮೊದಲು ತೆರಳುತ್ತೇನೆ. ಹಂದಿಗೋಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಾಲೆ ಪ್ರಾರಂಭವಾಗುವಲ್ಲಿ ಆಗಿನ ಕಾಲದ ಜನರ ಶ್ರಮ ಅವರ್ಣನೀಯವಾದುದ್ದು ಹೀಗಾಗಿ ನಾವೆಲ್ಲರೂ ಶಿಕ್ಷಣದ ಮೌಲ್ಯ ಅರಿತು ಮುಂದಿನ ಸಮಾಜವನ್ನು ಕಟ್ಟೋಣ ಎನ್ನುತ್ತಾ, ಶಾಲೆಗೆ ಅಗತ್ಯವಿರುವ ಹಲವಾರು ಬೇಡಿಕೆಯನ್ನು ಇಲ್ಲಿಯ ಜನ ನನ್ನ ಮುಂದೆ ಇಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನೂ ನಾನು ಮಾಡಿಕೊಡುತ್ತಾ ಬಂದಿದ್ದು, ಹಂದಿಗೋಣ ಶಾಲೆಗೂ ಅಗತ್ಯವಿರುವ ಕಟ್ಟಡ, ಕಾಂಪೌಂಡ್ ಹಾಗೂ ಇನ್ನಿತರ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಶತಮಾನೋತ್ಸವದ ಸ್ಮರಣ ಸಂಚಿಕೆ “ಶತಮಾನ ಪ್ರಭಾ” ಬಿಡುಗಡೆಗೊಳಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಇಲ್ಲಿಯ ಜನರ ಪ್ರೀತಿ ನನ್ನನ್ನು ಇಲ್ಲಿ ಹಿಡಿದು ನಿಲ್ಲಿಸಿತು. ಕಾರ್ಯದ ಒತ್ತಡದ ನಡುವೆಯೂ ಕೆಲ ಸಮಯ ನಿಮ್ಮೊಂದಿಗೆ ಕಳೆಯಲು ಸಿಕ್ಕಿದ್ದು ನನ್ನ ಸೌಭಾಗ್ಯ. ಊರಿಗೆ ಊರೇ ಶಾಲೆಯ ಸಂಭ್ರಮದಲ್ಲಿ ಭಾಗವಹಿಸಿದ್ದು ನೋಡಿ ಸಂತಸವಾಗುತ್ತಿದೆ. ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಯೋಜಿಸಿದ ಸಂಘಟಕರು, ಸಾಕಷ್ಟು ಪೂರ್ವ ಸಿದ್ದತೆಯನ್ನು ಮಾಡಿಕೊಂಡು ಕಾರ್ಯಕ್ರಮ ರೂಪಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಕಳೆದ ನೂರು ವರ್ಷಗಳಿಂದ ಜ್ಞಾನದ ಹರಿವನ್ನು ಹೆಚ್ಚಿಸಿರುವ ಈ ಶಾಲೆಯ ಪ್ರಾರಂಭದಲ್ಲಿ ನಮ್ಮ ಹಿರಿಯರು ನೀಡಿದ ಕೊಡುಗೆಗಳು ಅವಿಸ್ಮರಣೀಯವಾದದ್ದು, ಅಂತವರ ಮುಂದಿನ ಯೋಚನೆಯಿಂದಾಗಿ ನಾವಿಂದು ಸುಂದರ ಸಮಾಜ ನಿರ್ಮಾಣದ ಹಾದಿಯಲ್ಲಿದ್ದೇವೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ನಾನು ಸಹ ಇದೇ ಶಾಲೆಯ ಪೂರ್ವ ವಿದ್ಯಾರ್ಥಿ. ಇಲ್ಲಿ ಅತ್ಯುತ್ತಮ ರೀತಿಯಲ್ಲಿ ಶಿಕ್ಷಣವನ್ನು ಈ ಹಿಂದಿನಿಂದಲೂ ನೀಡುತ್ತಿದ್ದು ನಮ್ಮೆಲ್ಲರ ಬೆಳವಣಿಗೆಗೆ ಈ ಶಾಲೆ ಕಾರಣಿಕರ್ತವಾಗಿದೆ. ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕು ಕನ್ನಡ ಮಾಧ್ಯಮ ಶಾಲೆಗಳು ಬೆಳೆಯಬೇಕು ಈ ನಿಟ್ಟಿನಲ್ಲಿ ಈ ಶಾಲೆಗೆ ಬೇಕಾದ ಎಲ್ಲಾ ವಿಧದ ಸೌಲತ್ತು ಒದಗಿಸಿಕೊಡಲು ನಾವೆಲ್ಲರೂ ಸಿದ್ಧರಿದ್ದೇವೆ. ಸಂಸ್ಥೆ ಇನ್ನೂ ನೂರಾರು ವರ್ಷಗಳ ಕಾಲ ವಿದ್ಯಾರ್ಥಿಗಳ ಬದುಕನ್ನು ಬೆಳಗಲಿ ಎಂದು ಹಾರೈಸಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಒಂದು ಗ್ರಾಮದ ಅಭಿವೃದ್ಧಿಯಾಗಬೇಕಾದರೆ ಜನರು ಸುಶಿಕ್ಷಿತರಾಗಬೇಕು ಅಂತಹ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ನೂರು ವರ್ಷಗಳ ಸೇವೆಯನ್ನು ಸಲ್ಲಿಸಿದ ಸಾರ್ಥಕತೆ ಈ ಶಾಲೆಗಿದೆ. ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆ ನಾವೆಲ್ಲರೂ ಧಾವಂತದ ಬದುಕಿನಲ್ಲಿದ್ದೇವೆ. 100 ವರ್ಷ ಪೂರೈಸಿದ ಶಾಲೆಯ ಕಾರ್ಯಕ್ರಮದಲ್ಲಿ ಮೂರು ತಾಸು ಕುಳಿತುಕೊಳ್ಳಲು ಸಾಧ್ಯವಾಗದಷ್ಟು ಒತ್ತಡದ ಬದುಕು ಎಲ್ಲರದ್ದಾಗಿದೆ. ಆದರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದೃಷ್ಟಿಯಿಂದ ನಾವೆಲ್ಲರೂ ಶಿಕ್ಷಣ ಸಂಸ್ಥೆಗಳ ಜೊತೆಗೆ ಸ್ಪಂದಿಸಬೇಕು ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣಪತಿ ಪಿ. ಭಾಗ್ವತ್ ಪ್ರಾಸ್ಥಾವಿಕವಾಗಿ ಮಾತನಾಡಿ, ಹಿಂದಿನ ಕಾಲದಲ್ಲಿ ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ಇಲ್ಲಿಯ ಸ್ಥಳ ದಾನಿಗಳು, ಕಟ್ಟಡ ಹಾಗೂ ಇತರ ವ್ಯವಸ್ಥೆಗೆ ಸಹಕಾರ ನೀಡಿದ ಸರ್ವರೂ ಪ್ರಾಥಸ್ಮರಣೀಯರು ಅವರಿಂದಲೇ ಈ ಸಂಸ್ಥೆ ಈವರೆಗೆ ನಡೆದು ಬಂದಿದೆ. ಅವರೆಲ್ಲರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಕಲಭಾಗ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಪಿ. ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ನಿವೃತ್ತ ಸಿ.ಪಿ.ಐ ಎನ್.ಆರ್.ಮುಕ್ರಿ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಆರ್ ಉಪಾಧ್ಯಾಯ, ಮಹಿಳಾ ತಾಲೂಕಾ ಅಧ್ಯಕ್ಷೆ ಭಾರತಿ ಪಟಗಾರ, ಗ್ರಾ.ಪಂ ಸದಸ್ಯ ಸುರೇಶ ಪಟಗಾರ, ಗ್ರಾ.ಪಂ ಸದಸ್ಯ ನಾಗರಾಜ ಹೆಗಡೆ, ಪಿ.ಡಿ.ಓ ಡಿ.ಪ್ರಜ್ಞಾ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗಣಪತಿ ಪಟಗಾರ ಉಪಾಧ್ಯಕ್ಷೆ ಶಾರದಾ ಮುಕ್ರಿ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ವೆಂಕಟ್ರಮಣ ಪಟಗಾರ, ಚಂದ್ರಕಾಂತ ಮುಕ್ರಿ ವೇದಿಕೆಯಲ್ಲಿ ಇದ್ದರು.
ಇದೇ ವೇದಿಕೆಯಲ್ಲಿ ಹಂದಿಗೋಣ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನೂ, ಈಗ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ಜೊತೆಗೆ ಸಾಧಕರಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರ ನಾರಾಯಣ ಭಾಗ್ವತ್, ಕೃಷಿ ವಿಜ್ಞಾನಿ ಗಣಪತಿ ಮುಕ್ರಿ, ವಿಜ್ಞಾನಿ ಶಾಂತಲಾ ಎಸ್. ಹೆಚ್, ಸಮಾಜಸೇವಕ ತಿಮ್ಮು ನಾರಾಯಣ ಮಕ್ರಿ, ಪೊಲೀಸ್ ಇಲಾಖೆಯ ನಿವೃತ್ತ ಎನ್.ಆರ್ ಮುಕ್ರಿ, ಕೃಷಿಯಲ್ಲಿ ಡಾಕ್ಟರೇಟ್ ಪಡೆದಿರುವ ವಿವೇಕ ಭಟ್ಟ ಇವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕಿ ಸವಿತಾ ನಾಯ್ಕ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಭಟ್ಟ ವಂದನಾರ್ಪಣೆ ಗೈದರು. ಗಣೇಶ ಜೋಶಿ, ವಿಷ್ಣು ಪಟಗಾರ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೂ ಪೂರ್ವ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ನಾರಾಯಣ ಭಾಗ್ವತ್ ಸಂಯೋಜಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೂರ್ವ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಗಮನ ಸೆಳೆಯಿತು.