ಕಾರವಾರ: ನರಸಿಂಹ ದೇವರ ಜಾತ್ರೆಗಾಗಿ ಕೂರ್ಮಗಡ ದ್ವೀಪಕ್ಕೆ ತೆರಳುವ ಭಕ್ತರಿಗೆ ಅಗತ್ಯವಿರುವಷ್ಟು ಲೈಫ್‌ಜಾಕೆಟ್ ವ್ಯವಸ್ಥೆಯನ್ನು ಮಾಡಿ ಪ್ರತಿಯೊಬ್ಬ ಪ್ರಯಾಣಿಕರು ಅದನ್ನು ಧರಿಸುವಂತೆ ನೋಡಿಕೊಳ್ಳುವುದು ಪೋಲೀಸ್, ತಹಶಿಲ್ದಾರ್‌ಗಳ ಜವಾಬ್ದಾರಿಯಾಗಿದೆ ಎಂದು ಕಾರವಾರ ಸಹಾಯಕ ಆಯುಕ್ತ ಕನಿಷ್ಕ್ ಸೂಚನೆ ನೀಡಿದ್ದಾರೆ.
ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದ್ವೀಪಕ್ಕೆ ತೆರಳುವ ಎಲ್ಲಾ ಬೋಟ್‌ಗಳು ಮೀನುಗಾರಿಕಾ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಬೋಟ್‌ಗಳ ಸಾಮರ್ಥ್ಯದ ಮೇಲೆ ಭಕ್ತರನ್ನು ಹತ್ತಿಸಬೇಕು. ಮೀನುಗಾರಿಕಾ ಇಲಾಖೆ ಮೊದಲೇ ಈ ಬಗ್ಗೆ ಪರಿಶೀಲಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಬೈತಖೋಲ್ ಬಂದರಿನಿಂದ ಮಾತ್ರ ಬೋಟ್‌ಗಳು ಹೋಗಲು ಅವಕಾಶ ನೀಡಿದ್ದು, ಬೇರೆಡೆಯಿಂದ ಹೋಗುವಂತಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ಜ.25ರಂದು ಜಾತ್ರೆಯ ದಿನ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಬೈತಖೋಲ್‌ದಿಂದ ಜಾತ್ರೆಗೆ ತೆರಳಲು ಭಕ್ತರಿಗೆ ಅವಕಾಶವಿದ್ದು, ಸಂಜೆ 6 ಗಂಟೆಯ ಒಳಗೆ ಅಲ್ಲಿಂದ ವಾಪಸ ಹೊರಡಬೇಕು. 10 ವರ್ಷದೊಳಗಿನವರಿಗೆ, 70ವರ್ಷ ಮೇಲ್ಪಟ್ಟವರಿಗೆ ತೆರಳಲು ಅವಕಾಶವಲ್ಲ. ಮದ್ಯಪಾನ ಸಂಪೂರ್ಣವಾಗಿ ನಿಷೇಧಿಸಿದ್ದು, ಪೊಲೀಸರು ತಪಾಸಣೆ ಮಾಡಿಯೇ ಬೊಟ್ ಏರಲು ಅವಕಾಶ ನೀಡಬೇಕು ಎಂದು ಸೂಚಿಸಿದರು.
ನರಸಿಂಹ ದೇವರ ಮೂರ್ತಿಯನ್ನು ಕಡವಾಡದಿಂದ ಜ.25ರಂದು ಬೆಳಗ್ಗೆ 8.30ಕ್ಕೆ ತೆಗೆದುಕೊಂಡು ಹೊರಡಲಾಗುತ್ತದೆ. ದೋಣಿ ಮೂಲಕ ಕೂರ್ಮಗಡಕ್ಕೆ ಸಾಗಲಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ ದೇವರು ಕೂರ್ಮಗಡ ದ್ವೀಪ ತಲುಪಲಿದ್ದು, ಮೂರು ದೊಣಿ ವ್ಯವಸ್ಥೆ ಮಾಡಲಾಗಿದೆ. ಅಂದಾಜು 150 ಜನರು ದೇವರೊಂದಿಗೆ ತೆರಳುತ್ತೇವೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ನಿಶ್ಚಲ್ ನರೋನ್ಹ, ಡಿವೈಎಸ್‌ಪಿ ವ್ಯಾಲೆಂಟೈನ್ ಡಿಸೋಜಾ, ಕಾರವರ ಸಿಪಿಐ ರಮೇಶ ಹೂಗಾರ, ಕದ್ರಾ ಸಿಪಿಐ ಪ್ರಕಾಶ ದೇವಾಡಿಗ, ಬಂದರು ಇಲಾಖೆಯ ಸುರೇಶ ಶೆಟ್ಟಿ, ನಗರ, ಸಂಚಾರಿ, ಚಿತ್ತಾಕುಲ ಠಾಣೆಯ ಪಿಎಸ್‌ಐಗಳು, ಮುಖಂಡರು ಉಪಸ್ಥಿತದ್ದರು.