Slide
Slide
Slide
previous arrow
next arrow

ಲಿಂಗಾನುಪಾತ ವ್ಯತ್ಯಾಸದಿಂದ ಆರೋಗ್ಯಕರ ಸಮಾಜ ನಿರ್ಮಾಣ ಕಷ್ಟ: ಡಿಸಿ ಗಂಗೂಬಾಯಿ ಮಾನಕರ

300x250 AD

ಕಾರವಾರ:ಜಿಲ್ಲೆಯಲ್ಲಿ ಲಿಂಗಾನುಪಾತವನ್ನು ಹೆಚ್ಚಿಸಲು ಹೆಣ್ಣು ಮಕ್ಕಳನ್ನು ಹೆತ್ತವರನ್ನು ಅಭಿನಂದಿಸುವ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಣ್ಣುಮಕ್ಕಳನ್ನು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸನ್ಮಾನಿಸಿ, ವಿಶೇಷ ಗೌರವ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿಯಲ್ಲಿನ ವಿವಿಧ ಯೋಜನೆಗಳ ಪ್ರಗತಿ ಕುರಿತ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಭ್ರೂಣಹತ್ಯೆ ತಡೆಯುವ ಸಲುವಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೆಣ್ಣುಮಕ್ಕಳು ಆರ್ಥಿಕವಾಗಿ ಹೊರೆಯಾಗುತ್ತಾರೆ ಎಂಬ ಭಾವನೆಯಿಂದ ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರಾಗಿ ಸಮಾನವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆಯನ್ನು ಮಾಡಿದ್ದು, ತಾನೇ ದುಡಿದು ಕುಟುಂಬದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಆದ್ದರಿಂದ ಹೆಣ್ಣುಮಕ್ಕಳ ಜನನವನ್ನು ಪೋಷಕರು ಸಂಭ್ರಮಿಸುವಂತೆ ಮಾಡಬೇಕು. ಜಿಲ್ಲೆಯಲ್ಲಿ ಜನಿಸುವ ಹೆಣ್ಣುಮಕ್ಕಳ ಪೋಷಕರನ್ನು ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅಭಿನಂದಿಸುವ ಕಾರ್ಯ ನಡೆಯಬೇಕು. ಅಲ್ಲದೇ ಸಾಧನೆ ಮಾಡಿದ ಹೆಣ್ಣುಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಕೆಲಸ ಆಗಬೇಕು, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಲಿಂಗಾನುಪಾತದ ವ್ಯತ್ಯಾಸ ಅಡ್ಡಿಯಾಗಬಾರದು ಎಂದರು.

ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ತಮ್ಮಲ್ಲಿಗೆ ಬರುವ ರೋಗಿಗಳ ಕುರಿತು ಸಂಪೂರ್ಣ ವಿವರಗಳನ್ನು ಪ್ರತ್ಯೇಕ ರಿಜಿಸ್ಟರ್ನಲ್ಲಿ ದಾಖಲಿಸಬೇಕು. ತಮ್ಮ ಕೇಂದ್ರಗಳಲ್ಲಿ ಆರೋಗ್ಯ ಸಂಬಂಧಿತ ಸ್ಕ್ಯಾನಿಂಗ್ ಹೊರತುಪಡಿಸಿ, ಭ್ರೂಣಲಿಂಗ ಪತ್ತೆ ಮಾಡಬಾರದು, ಈ ಬಗ್ಗೆ ರೋಗಿಗಳಿಗೆ ಸ್ಪಷ್ಟವಾಗಿ ಕಾಣುವಂತೆ ಸೂಚನಾ ಫಲಕಗಳನ್ನು ಹಾಗು ಭ್ರೂಣಲಿಂಗ ಪತ್ತೆ ಕುರಿತು ಶಿಕ್ಷೆಯ ಪ್ರಮಾಣವನ್ನು ಫಲಕಗಳಲ್ಲಿ ಅಳವಡಿಸಬೇಕು. ಹೆಣ್ಣುಮಕ್ಕಳ ಸುರಕ್ಷತೆ, ಮತ್ತು ಬೆಳವಣಿಗೆ ಕುರಿತಂತೆ, ಉತ್ತರಕನ್ನಡ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ತಮಗೆ ನೀಡಿರುವ ಅಧಿಕಾರಗಳನ್ನು ಚಲಾಯಿಸಿ, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

300x250 AD

ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆಯುವ ಕುರಿತಂತೆ ಮಹಿಳೆ ಮತ್ತು ಮಕ್ಕಳು ಕಾಣೆಯಾದ ಪ್ರಕರಣಗಳಲ್ಲಿ ತಕ್ಷಣ ಪೊಲೀಸ್ ಇಲಾಖೆಯಿಂದ ಅವರ ಪತ್ತೆಗೆ ಕ್ರಮ ಕೈಗೊಳ್ಳಬೇಕು, ಕಳೆದ 1 ವರ್ಷದಲ್ಲಿ ನಾಪತ್ತೆಯಾದ ಮತ್ತು ಪತ್ತೆಯಾದ ಮಹಿಳೆ ಮತ್ತು ಮಕ್ಕಳು ವಿವರಗಳು ಮತ್ತು ಪ್ರಸ್ತುತ ಅವರ ಸ್ಥಿತಿಗತಿ ಕುರಿತಂತೆ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತ್ ಗಳಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ರಚಿಸಲಾಗಿರುವ ಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ನಿಯಮಿತವಾಗಿ ಸಭೆಗಳನ್ನು ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಅಂತಹ ಪ್ರಕರಣಗಳು ನಡೆಯವಾಗ ಮತ್ತು
ಈಗಾಗಲೇ ನಡೆದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಬಾಲ್ಯ ವಿವಾಹ ತಡೆ ಪ್ರಕರಣಗಳಲ್ಲಿ ಪುನ: ವಿವಾಹ ಪ್ರಯತ್ನಗಳು ನಡೆಯದಂತೆ ತೀವ್ರ ನಿಗಾವಹಿಸಬೇಕು. ಆರೋಗ್ಯ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಪ್ರೌಢಶಾಲೆಗಳಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುವ 13 ಪ್ರಕರಣಗಳನ್ನು ತಡೆದಿದ್ದು, ಈ ಬಗ್ಗೆ ಪೋಷಕರಿಗೆ ಸೂಕ್ತ ಅರಿವು ಮೂಡಿಸಲಾಗಿದೆ. ಇದುವರೆಗೆ ಯಾವುದೇ ಬಾಲ್ಯ ವಿವಾಹ ಪ್ರಕರಣ ನಡೆದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಹೆಚ್.ಕುಕನೂರು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್, ಡಿ.ಹೆಚ್.ಓ. ಡಾ. ನೀರಜ್, ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ವಿನೋದ್ ಅಣ್ವೇಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top