ಕಾರವಾರ: ಜಿಲ್ಲೆಯಲ್ಲಿನ ಲಿಂಗತ್ವಅಲ್ಪ ಸಂಖ್ಯಾತರು ತೋರಿಕೊಂಡ ತಮ್ಮ ನೋವುಗಳಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ,ಎಲ್ಲ ಅರ್ಹರಿಗೂ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿಯಲ್ಲಿನ ವಿವಿಧ ಯೋಜನೆಗಳ ಪ್ರಗತಿ ಕುರಿತ ತ್ರೈಮಾಸಿಕ ಸಭೆಯಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಪರಿಹರಿಸುವಂತೆ ಮನವಿ ಮಾಡಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ 310 ಮಂದಿ ಲಿಂಗತ್ವಅಲ್ಪ ಸಂಖ್ಯಾತರಿದ್ದು, ಸಮಾಜ ಮತ್ತು ತಮ್ಮ ಕುಟುಂಬ ತಮ್ಮನ್ನು ಕೀಳರಿಮೆಯಿಂದ ಕಾಣುತ್ತಾರೆ ಎಂಬ ಕಾರಣದಿಂದ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದೇ , ಸಮುದಾಯದಲ್ಲಿ ಮಾತ್ರ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಗುರುತಿಸಿಕೊಂಡವರು ತಮ್ಮ ಕುಟುಂಬಗಳಿಂದ ದೂರವಿದ್ದು ಬಾಡಿಗೆ ಮನೆಯಲ್ಲಿ ವಾಸವಿದ್ದು, ತಮಗೆ ಮನೆ ಮಾಲೀಕರು ಇತರರಿಗಿಂತ ಹೆಚ್ಚು ಮನೆ ಬಾಡಿಗೆ ಪಡೆಯುತ್ತಿದ್ದು, ಅಲ್ಲದೇ ಸಣ್ಣ ಪುಟ್ಟ ಕಾರಣಗಳಿಗೆ ಮನೆ ಖಾಲಿ ಮಾಡಿಸುತ್ತಿದ್ದಾರೆ. ಹೆಚ್ಚಿನ ಮಂದಿ ಭಿಕ್ಷಾಟನೆಯಲ್ಲಿ ದುಡಿಮೆ ಮಾಡುತ್ತಿದ್ದು, ಜಿಲ್ಲಾಡಳಿತದಿಂದ ಸೂಕ್ತ ಮನೆ ಮಂಜೂರಾತಿ ಮಾಡಿಕೊಡುವಂತೆ ಹಾಗೂ ಸ್ವಉದ್ಯೋಗಕ್ಕೆ ವ್ಯವಸ್ಥೆ ಮಾಡುವಂತೆ ಲಿಂಗತ್ವಅಲ್ಪ ಸಂಖ್ಯಾತರ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳಲ್ಲಿ ಕೋರಿದರು.
ತಮಗೆ ಖಂಡಿತ ಮನೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು, ತಾವುಗಳು ಭಿಕ್ಷಾಟನೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು , ಜಿಲ್ಲಾಡಳಿತದ ಮೂಲಕ ವಿವಿಧ ಇಲಾಖೆಗಳಲ್ಲಿರುವ ಸ್ವಯಂ ಉದ್ಯೋಗ ಯೋಜನೆಗಳು , ತರಬೇತಿ ಯೋಜನೆಗಳು ಮತ್ತು ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು ನೀಡುವ ಸೌಲಭ್ಯಗಳನ್ನು ಮತ್ತು ತಾವು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಸಹ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಲಿಂಗತ್ವಅಲ್ಪ ಸಂಖ್ಯಾತರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ತಮ್ಮ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಿಕೊಳ್ಳುವಂತೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು , ಜಿಲ್ಲಾಡಳಿತದ ವತಿಯಿಂದ ನಿಮಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಅವಶ್ಯವಿರುವ ಎಲ್ಲಾ ಅವಕಾಶಗಳನ್ನು ನೀಡಲಾಗುವುದು, ಈ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ 3 ಮಂದಿ ಲಿಂಗತ್ವಅಲ್ಪ ಸಂಖ್ಯಾತರಿಗೆ ಜಿಲ್ಲಾಧಿಕಾರಿಗಳು ಟಿ.ಜಿ.ಕಾರ್ಡ್ ಗಳನ್ನು ವಿತರಿಸಿದರು. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಇಲಾಖೆಯ ವಿವಿಧ ಯೋಜನೆಗಳ ಪ್ರಚಾರದ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕಿ ಹೆಚ್.ಕುಕನೂರು, ಡಿ.ಹೆಚ್.ಓ. ಡಾ. ನೀರಜ್, ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ವಿನೋದ್ ಅಣ್ವೇಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.