Slide
Slide
Slide
previous arrow
next arrow

ದಿಢೀರ್ ಪ್ರವಾಹ: ಪರಿಸ್ಥಿತಿ ನಿರ್ವಹಣೆಯ ಅಣಕು ಕಾರ್ಯಚರಣೆ ಯಶಸ್ವಿ

300x250 AD

ಕಾರವಾರ: ಜಿಲ್ಲೆಯಲ್ಲಿ ಇಂದು ಸುರಿದ ಭಾರಿ ಮಳೆಯ ಕಾರಣ ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ಉದ್ಭವಿಸಿದ ದಿಢೀರ್ ಪ್ರವಾಹ ಪರಿಸ್ಥಿತಿಯನ್ನು ತಕ್ಷಣದಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾಡಳಿತ , ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಯಿತು.

ಇದು ನಿಜ ಘಟನೆಯಲ್ಲ. ಜಿಲ್ಲೆಯಲ್ಲಿ ವಿಕೋಪ ಪರಿಸ್ಥಿತಿಯಲ್ಲಿ ತಕ್ಷಣ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಕುರಿತು ನಡೆದ ಅಣುಕು ಕಾರ್ಯಾಚರಣೆಯ ಭಾಗ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ರಾಜ್ಯಾದ್ಯಂತ ಜ.11, ಗುರುವಾರದಂದು ಏಕಕಾಲದಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ನಡೆದ ಅಣಕು ಕಾರ್ಯಚರಣೆಯಲ್ಲಿ, ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಅಣಕು ಕಾರ್ಯಚರಣೆ ನಡೆಯಿತು.

ಬೆಳಗ್ಗೆ 10 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಂಟ್ರೋಲ್ ರೂಂಗೆ ಕಾರವಾರ ತಾಲೂಕಿನ ಹಲಗೇಜೋಗ್ ಮತ್ತು ಅಂಕೋಲ ತಾಲೂಕಿನ ಶಿರಗುಂಜಿ ಗ್ರಾಮದಲ್ಲಿ ಭಾರೀ ಮಳೆಯ ಕಾರಣ ಪ್ರವಾಹ ಪರಿಸ್ಥಿತಿ ತಲೆದೋರಿದೆ ಎಂದು ಸಾರ್ವಜನಿಕರ ದೂರು ಸ್ವೀಕಾರವಾಯಿತು. ಕಂಟ್ರೋಲ್ ರೂಂನಿಂದ ಕೂಡಲೇ ಈ ಬಗ್ಗೆ ಕಾರವಾರ ಮತ್ತು ಅಂಕೋಲ ತಾಲೂಕಿನ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಮಾಹಿತಿ ನೀಡಿ ಅಲ್ಲಿನ ನೈಜ ಪರಿಸ್ಥಿತಿ ಕುರಿತು ಕೂಡಲೇ ಮಾಹಿತಿ ತಿಳಿಸುವಂತೆ ತಿಳಿಸಲಾಯಿತು. ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್, ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಮಾಹಿತಿ ಪಡೆದು ಸಂದರ್ಭವನ್ನು ದೃಢೀಕರಿಸಿದ ನಂತರ ಕೂಡಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.
ತಕ್ಷಣ ವೇಸದ್ರಿ ಗ್ರಾಮಗಳಲ್ಲಿ ಎಲ್ಲಾ ರೀತಿಯ ರಕ್ಷಣಾ ಕಾರ್ಯಗಳನ್ನು ಕೈಗೊಂಡು, ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒಗದಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು. ಕೂಡಲೇ ಕಾರ್ಯಪ್ರವತ್ತರಾದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಸಿದ್ದತೆಗಳೊಂದಿಗೆ ಸ್ಥಳಕ್ಕೆ ತೆರಳಿ, ಸಂತ್ರಸ್ಥರನ್ನು ಪ್ರವಾಹ ಸಂದರ್ಭಗಳಲ್ಲಿ ರಕ್ಷಣೆಗಾಗಿ ಗುರುತಿಸಲಾಗಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಈ ಕೇಂದ್ರಕ್ಕೆ ಈಗಾಗಲೇ ಆಗಮಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಸಂತ್ರಸ್ಥರಿಗೆ ಸೂಕ್ತಚಿಕಿತ್ಸೆ ನೀಡಿದರು. ಆಹಾರ ಇಲಾಖೆಯ ಮೂಲಕ ಸಂತ್ರಸ್ಥರಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿದರು.

300x250 AD

ಪ್ರವಾಹದ ಮಾಹಿತಿ ದೊರೆತ 2 ಗಂಟೆಗಳ ಅವಧಿಯೊಳಗೆ ಎಲ್ಲಾ ಸಂತ್ರಸ್ಥರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಯಿತು. ಅಣಕು ಕಾರ್ಯಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು. ಕಾರ್ಯಾಚರಣೆಯ ನೋಡಲ್ ಅಧಿಕಾರಿಯಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಡೆಪ್ಯುಟಿ ಕಮಾಂಡರ್ ಕಾರ್ಯನಿರ್ವಹಿಸಿದರು. ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಕೇಂದ್ರದ ಮೂಲಕ ಇಡೀ ಕಾರ್ಯಚರಣೆಯ ಸಮನ್ವಯ ನಡೆಸಲಾಯಿತು.

ಜಿಲ್ಲೆಯಲ್ಲಿ ಕಂಡುಬರುವ ಯಾವುದೇ ರೀತಿಯ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ದವಾಗಿದ್ದು, ರಕ್ಷಣೆಗೆ ಎಲ್ಲಾ ರೀತಿಯ ಅಗತ್ಯ ರಕ್ಷಣಾ ಉಪಕರಣಗಳು, ವಾಹನಗಳು ಮತ್ತು ಸಿಬ್ಬಂದಿಗಳು ಸದಾಸಿದ್ದವಾಗಿದ್ದಾರೆ. ಎಲ್ಲಾ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಇದ್ದು, ನೈಜ ಪರಿಸ್ಥಿತಿಯಲ್ಲಿ ಇನ್ನೂ ಅತ್ಯಂತ ಕ್ಷಿಪ್ರವಾಗಿ ಸಾರ್ವಜನಿಕರ ರಕ್ಷಣೆಗೆ ಜಿಲ್ಲಾಡಳಿತ ಬದ್ದವಾಗಿದೆ:– ಗಂಗೂಬಾಯಿ ಮಾನಕರ , ಜಿಲ್ಲಾಧಿಕಾರಿಗಳು, ಉತ್ತರಕನ್ನಡಜಿಲ್ಲೆ.

Share This
300x250 AD
300x250 AD
300x250 AD
Back to top