ಸಿದ್ದಾಪುರ: ಪಟ್ಟಣದ ಶಂಕರಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಹಾಗೂ ತಾಲೂಕು ಮಹಿಳಾ ಜ್ಞಾನವಿಕಾಸ ಕೇಂದ್ರದ ಆಶ್ರಯದಲ್ಲಿ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಬುಧವಾರ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಮಹಿಳೆಯರ ಮೇಲಿದೆ ಹಾಗೂ ಮಕ್ಕಳು ದುಶ್ಚಟ ಮತ್ತು ದುರಾಭ್ಯಾಸಗಳಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಗ್ರಾಮದ ಸರ್ವತೋಮುಖ ಅಭಿವೃದ್ಧಿ ಆಗಬೇಕು. ಮಾನವ ಸಂಪನ್ಮೂಲ ಸರಿಯಾಗಿ ಬಳಕೆ ಆಗಬೇಕು. ದುಡಿಯುವ ಕೈಗಳ ಸದ್ಬಳಕೆ ಆಗಬೇಕೆಂದು ಕನಸುಕಂಡು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಾರ್ಯಗತಗೊಳಿಸುತ್ತಿದ್ದಾರೆ. ಮಕ್ಕಳು ದಾರಿ ತಪ್ಪದಂತೆ, ಅಡ್ಡದಾರಿ ಹಿಡಿಯದಂತೆ ಮಹಿಳೆಯರು ಎಚ್ಚರವಹಿಸಬೇಕಾಗಿದೆ. ಮದ್ಯಪಾನ ಇಡೀ ಕುಟುಂಬ ಹಾಗೂ ಸಮಾಜವನ್ನು ನಾಶಮಾಡುವಂತಹುದಾಗಿದೆ. ಶಿಸ್ತು, ಸಮಯ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸುಮಂಗಲಾ ವಸಂತ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ದೇವಕಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಮೇಶ ಹೆಗಡೆ ಹಾರ್ಸಿಮನೆ ಉಪಸ್ಥಿತರಿದ್ದರು. ಯಲ್ಲಾಪುರ ತಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ ಕುಟುಂಬದ ನಿರ್ವಹಣೆಯಲ್ಲಿ ಮಹಿಳೆ ಕುರಿತು ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ ಸ್ವಾಗತಿಸಿದರು.ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಲಲಿತಾ ವಾರ್ಷಿಕ ವರದಿ ವಾಚಿಸಿದರು. ಉದಯ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾನಿರತರು ಸಹಕರಿಸಿದರು.