ಜೊಯಿಡಾ: ತಾಲೂಕಿನ ಶ್ರೀ ಚೆನ್ನಬಸವಣ್ಣನವರ ಶ್ರೀ ಕ್ಷೇತ್ರ ಉಳವಿಯಲ್ಲಿ ನಡೆಯುವ ಜಾತ್ರೆಯ ಪೂರ್ವ ಸಿದ್ಧತೆ ಬುಧವಾರ ಶ್ರೀ ಕ್ಷೇತ್ರ ಉಳವಿಯಲ್ಲಿ ಕಾರವಾರದ ಸಹಾಯಕ ಕಮಿಷನರ್ ಕನಿಷ್ಕ್ ಅಧ್ಯಕ್ಷತೆಯಲ್ಲಿ ನಡೆಯಿತು.
ಜಾತ್ರೆಗೆ ನಡೆಯಬೇಕಾಗಿದ್ದ ಸಿದ್ಧತೆಗಳು, ಅವುಗಳ ಪಾಲನೆಯ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ವಿಶೇಷವಾಗಿ ಅರಣ್ಯ ಇಲಾಖೆ, ಮತ್ತು ಸಾರಿಗೆ , ಅಬಕಾರಿ ಇಲಾಖೆಗಳ ಕುರಿತು ಚರ್ಚೆ ನಡೆದವು. ಲೋಕೋಪಯೋಗಿ ಇಲಾಖೆಯ ರಸ್ತೆ ಪೋಟೊಲಿ , ಗುಂದ , ಉಳವಿ ಮಾರ್ಗ ತೀರಾ ಹದಗೆಟ್ಟಿದೆ ಈ ಮಾರ್ಗಕ್ಕೆ ತೇಪೆ ಕಾರ್ಯ ಕೂಡ ಸರಿಯಾಗಿ ಮಾಡಿಲ್ಲ, ರಸ್ತೆಯನ್ನು ಜಾತ್ರೆಯ ಒಳಗೆ ಸರಿಪಡಿಸದಿದ್ದರೆ ಭಕ್ತರಾದ ನಾವು ಪೋಟೊಲಿಯಲ್ಲಿ ರಸ್ತೆ ತಡೆದು ಫೆ.20 ರಂದು ಪ್ರತಿಭಟನೆ ಮಾಡುತ್ತೇವೆ ಎಂದು ರಾಜು ಬೈಲಹೊಂಗಲ ಮತ್ತು ಸಂಗಡಿಗರು ತೀವ್ರವಾಗಿ ಎಚ್ಚರಿಸಿದರು. ಜಾತ್ರೆಯಲ್ಲಿ ಉಳವಿ ತುಂಬಾ ಸಾರಾಯಿ ಭರಾಟೆ ಜೋರಾಗಿ ಇರುವುದರಿಂದ ಅಬಕಾರಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು. ಕುಡಿಯುವ ನೀರಿನ ಮತ್ತು ಸಾರಿಗೆ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಉತ್ತರಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಫೆ.16 ರಿಂದ 26 ರವರೆಗೆ ಉಳವಿ ಜಾತ್ರೆ ನಡೆಯಲಿದ್ದು ಫೆ.24 ರಂದು ಮಧ್ಯಾಹ್ನ 4 ಘಂಟೆಗೆ ಮಹಾರಥೋತ್ಸವ ನಡೆಯುವುದೆಂದು ವ್ಯವಸ್ಥಾಪಕ ಶಂಕರಯ್ಯ ಕಲ್ಮಠ ಶಾಸ್ತ್ರಿ ತಿಳಿಸಿದರು. ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಕುರಿತು ದಾಂಡೇಲಿಯ ಡಿ.ವೈ. ಎಸ್. ಪಿ ಶಿವಾನಂದ ಕಟಗಿ ತಮ್ಮ ಸಿಬ್ಬಂದಿಗಳು ಕ್ರಮ ಕೈಗೊಳ್ಳುವ ಕ್ರಮಗಳ ಕುರಿತು ವಿವರಿಸಿದರು.
ಕೊಡಸಳ್ಳಿ ತೂಗು ಸೇತುವೆ ನಮ್ಮದಿದ್ದು ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಪಂ ಕಿರುಕುಳ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ತಹಶಿಲ್ದಾರ ಮಂಜುನಾಥ ಮನ್ನೊಳಿ ಮಾಹಿತಿ ನೀಡಿದರು. ಹೆಸ್ಕಾಂ ಪಶುವೈದ್ಯರು , ವೈದ್ಯರು ಗ್ರಾಪಂ ದವರು ಮಾಹಿತಿ ಒದಗಿಸಿದರು.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಕನಿಷ್ಕ ಮಾತನಾಡಿ ನನಗೆ ಬಸವಣ್ಣನ ದರ್ಶನ ಆಗಿರುವುದು ತುಂಬಾ ಸಂತಸ ತಂದಿದೆ ಇದು ಒಬ್ಬರ ಜಾತ್ರೆ ಅಲ್ಲ ನಮ್ಮ ನಿಮ್ಮೆಲ್ಲರ ಜಾತ್ರೆ. ನಿಮ್ಮ ಅಭಿಪ್ರಾಯ ತಿಳಿದಿದ್ದೇನೆ, ಚೆನ್ನಾಗಿ ಜಾತ್ರೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಉಳವಿ ಟ್ರಸ್ಟ್ ಉಪಾಧ್ಯಕ್ಷ ಸಂಜಯ್ ಕಿತ್ತೂರು , ತಹಶೀಲ್ದಾರ್ ಮಂಜುನಾಥ ಮುನ್ನೊಳಿ , ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ , ನಂದಿಗದ್ದೆ ಗ್ರಾಪಂ ಅಧ್ಯಕ್ಷ ಅರುಣ್ ದೇಸಾಯಿ ಉಳವಿ ಗ್ರಾಪಂ ಸದಸ್ಯರು ಟ್ರಸ್ಟ್ ಸದಸ್ಯರು ಸಿಪಿಐ ನಿತ್ಯಾನಂದ ಪಂಡಿತ್ ಪಿಎಸಐ ಮಹೇಶ ಎಂ. ಎಲ್ಲಾ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.