ಸಿದ್ದಾಪುರ: ವ್ಯವಹಾರಿಕ ಕೌಶಲ್ಯ, ಸಂವಹನ ಜ್ಞಾನ ಸೇರಿದಂತೆ ಹಲವು ದೃಷ್ಠಿಯಿಂದ ಮಕ್ಕಳ ಸಂತೆ ಹೆಚ್ಚು ಉಪಯುಕ್ತವಾಗುತ್ತದೆ. ನಿತ್ಯ ನಾಲ್ಕು ಗೋಡೆಯ ನಡುವೆ ಕುಳಿತು ಶಿಕ್ಷಣ ಪಡೆದುಕೊಂಡರೆ ಅದು ಪರಿಪೂರ್ಣ ಆಗುವುದಿಲ್ಲ. ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಶಿರಸಿ ಕದಂಬ ಮಾರ್ಕೆಟಿಂಗ್ ಸೊಸೈಟಿಯ ಉಪಾಧ್ಯಕ್ಷ ಎಂ.ವಿ.ಭಟ್ಟ ತಟ್ಟಿಕೈ ಹೇಳಿದರು.
ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೆಲೆಮಾವು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ ಹೆಗಡೆ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಸದಸ್ಯರಾದ ರಾಜೀವ್ ಭಾಗ್ವತ್,ಗೀತಾ ಹೆಗಡೆ, ಎಸ್‌ಡಿಎಂಸಿ ಪದಾಧಿಕಾರಿಗಳಿದ್ದರು. ಮಕ್ಕಳ ಸಂತೆಯಲ್ಲಿ ಕಬ್ಬಿನ ಹಾಲು, ಫ್ಯಾನ್ಸಿ ಸ್ಟೋರ್ಸ್, ಸಿಹಿ ತಿಂಡಿ, ತರಕಾರಿ, ಸ್ಟೇಶನರಿ, ಬಟ್ಟೆ, ವಿವಿಧ ಹಣ್ಣುಗಳು, ಮಸಾಲೆ ಮಂಡಕ್ಕಿ ಸೇರಿದಂತೆ ವಿವಿಧ 45 ಅಂಗಡಿಗಳನ್ನು ಮಕ್ಕಳು ನಿರ್ವಹಿಸಿದರು. ಒಟ್ಟೂ 1ಲಕ್ಷದಷ್ಟು ವಹಿವಾಟು ನಡೆಸಿ 21ಸಾವಿರ ರೂಗಳಷ್ಟು ಲಾಭಗಳಿಸಿ ಗಮನಸೆಳೆದರು. ಮುಖ್ಯಾಧ್ಯಾಪಕಿ ಕಲ್ಪನಾ ವೈದ್ಯ, ಶಿಕ್ಷಕರಾದ ಯಮುನಾ ಪಟಗಾರ, ರೇಣುಖಾ ನಾಯ್ಕ, ಎಂ.ಎಸ್.ಹೆಗಡೆ ಮಕ್ಕಳಿಗೆ ವ್ಯಾಪಾರ ಮಾಡುವ ಕ್ರಮದ ಕುರಿತು ಮಾಹಿತಿ ನೀಡಿ ಸಹಕರಿಸಿದರು.