ಕಾರವಾರ: ಇಲ್ಲಿನ ಮಾರುತಿ ಗಲ್ಲಿಯ ಮಾರುತಿ ದೇವರ ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾಗಿದ್ದ ಬೆಗೆ ಬಗೆಯ ಬಣ್ಣ ಬಣ್ಣದ ರಂಗೋಲಿಗಳು ಆಕರ್ಷಕವಾಗಿತ್ತು. ಶ್ರೀದೇವರನ್ನು ಹೂವು ಹಾಗೂ ಹಣ್ಣುಗಳಿಂದ ಅಲಂಕರಿಸಲಾಗಿದ್ದು, ದೇವಸ್ಥಾನವು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು. ಸಾವಿರಾರು ಭಕ್ತರು ಶ್ರೀದೇವರ ದರ್ಶನ ನಡೆದು ಪುನೀತರಾದರು. ಜಾತೆಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಈ ಜಾತ್ರೆಯಂದು ರಂಗೋಲಿ ಹಾಕುವುದೇ ವಿಶೇಷವಾಗಿದ್ದು, ಬಣ್ಣ ಬಣ್ಣದ, ಬಗೆ ಬಗೆಯ ರಂಗೋಲಿಗಳು ಜನರ ಕಣ್ಮನ ಸೆಳೆದವರು. ರಾಮ ಮಂದಿರದ ಮಾದರಿಯ ರಂಗೋಲಿಯೇ ಈ ಬಾರಿ ಹೆಚ್ಚಿತ್ತು. ಪ್ರಧಾನಿ ಮೋದಿ ರಾಮನಿಗೆ ವಂದಿಸುತ್ತಿರುವುದು, ಯೋಗಿ ಆದಿತ್ಯನಾಥ, ಬಗೆ ಬಗೆಯ ಗಣೇಶನ ಮಾದರಿಗಳು ರಂಗೋಲಿಯಲ್ಲಿ ಅರಳಿತ್ತು. ಇದಲ್ಲದೇ ಹೂವಿನ ಎಸಳುಗಳನ್ನು ಬಳಸಿ ಕೂಡಾ ಚಿತ್ರ ಬಿಡಿಸಲಾಗಿತ್ತು. ಸ್ಥಳೀಯರೊಂದೇ ಅಲ್ಲದೇ ಗೋವಾದಿಂದ ಕೂಡಾ ರಂಗೋಲಿ ನೋಡಲೆಂದೇ ಜನರು ಆಗಮಿಸಿದ್ದರು. ಎಲ್ಲಾ ರಂಗೋಲಿಗಳು ಅತ್ಯಂತ ನಯನಮನೋಹರವಾಗಿ, ಚಿತ್ತಾಕರ್ಷಕವಾಗಿ ಮೂಡಿದ್ದು, ಮೆಚ್ಚುಗೆಗೆ ಕಾರಣವಾಗಿತ್ತು.
ಕಾರವಾರದ ರಂಗೋಲಿ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಸಹ ಭಿನ್ನ ವಿಭಿನ್ನ ರಂಗೋಲಿಗಳಿಂದ ಜನರ ಕಣ್ಮನ ಸೆಳೆದಿದ್ದಂತೂ ಸತ್ಯ. ಇತ್ತೀಚಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ರಂಗೋಲಿ ಕಲೆಯನ್ನು ಕಾರವಾರಿಗರು ಜಾತ್ರೆಯ ಮೂಲಕ ಉಳಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.