Slide
Slide
Slide
previous arrow
next arrow

ಮಾನವೀಯ ಮೌಲ್ಯ ಹೆಚ್ಚಿಸಲು ಗಮನ ಹರಿಸಿ: ಎಸ್.ಜೆ.ಕೈರನ್

300x250 AD

ಹೊನ್ನಾವರ: ಕೇವಲ ಮಕ್ಕಳ ಪರ್ಸೆಂಟೇಜ್ ಹಿಂದೆ ಜೋತು ಬೀಳದೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಾಲಕರು ಗಮನ ಹರಿಸಬೇಕಾಗಿದೆ ಎಂದು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ವಿಶ್ರಾಂತ ಶಿಕ್ಷಕ ಎಸ್.ಜೆ. ಕೈರನ್ ಹೇಳಿದರು.

ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಕೆರೆಕೋಣ ಶಾಲೆಯಲ್ಲಿ ಹಮ್ಮಿಕೊಂಡ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕೆರೆಕೋಣ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ, ಸಹಕಾರ ಕೊಡುವ SDMC, ಬಲಿಷ್ಠ ಹಳೆ ವಿದ್ಯಾರ್ಥಿಗಳ ಸಂಘ ಇದೆ. ಹಾಗಾಗಿ ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಲ್ಕೋಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮುನಾ ಕೃಷ್ಣಮೂರ್ತಿ ನಾಯ್ಕ ಮಾತನಾಡಿ, ಪ್ರತಿ ಮಗು ಒಂದಲ್ಲ ಒಂದು ಪ್ರತಿಭೆಯನ್ನು ಪಡೆದುಕೊಂಡು ಈ ಜಗತ್ತಿಗೆ ಬಂದಿರುತ್ತದೆ ಅಂತಹ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅದನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶನ ಮಾಡಿ ಪ್ರೋತ್ಸಾಹಿಸುವುದೇ ಶಾಲಾ ವಾರ್ಷಿಕೋತ್ಸವ. ಇದರ ಜೊತೆ ಮಕ್ಕಳು ಪಾಲಕರು ಊರಿನ ನಾಗರಿಕರ ಕೂಡುವಿಕೆ ಕೂಡ ಈ ಸಂದರ್ಭದಲ್ಲಿ ನಡೆಯುತ್ತದೆ ಇದು ಶಾಲೆಯ ಅಭಿವೃದ್ಧಿಗೆ ಪೂರಕ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕರಾದ ಅಭಿಮಾನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂದೀಪ ಪೂಜಾರಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಪುಸ್ತಕದ ಗೀಳಿಗೆ ಮಾತ್ರ ಅಂಟಿಕೊಳ್ಳದೆ ಸಾಮಾಜಿಕ ಕೆಲಸಗಳಲ್ಲೂ, ಸಾಂಸ್ಕೃತಿಕ ರಂಗದಲ್ಲೂ ಮೇಲುಗೈಯನ್ನು ಸಾಧಿಸುತ್ತಾರೆ. ಆದರೆ ಇತ್ತೀಚಿಗೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಹಾಗಾಗಿ “ಸರ್ಕಾರಿ ಶಾಲೆ ಉಳಿಸಿ ” ಎನ್ನುವ ಅಭಿಯಾನವನ್ನು ಆರಂಭಿಸಿದ್ದೇನೆ ಎಂದರು. ಉದಯ ಹಸ್ತಪತ್ರಿಕೆ ಉದ್ಘಾಟಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಎಸ್. ಎಂ. ಹೆಗಡೆ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಪ್ರತಿಭಾನ್ವಿತರಾಗಿದ್ದು, ಮೆರಿಟ್ನಲ್ಲಿ ಆಯ್ಕೆಯಾದವರಾಗಿರುತ್ತಾರೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ, ಕಾರಣ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ ಎಂದರು. ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಜಿ ನಾಯ್ಕ ಮಾತನಾಡಿ ತಾಲೂಕಿನ ಉತ್ತಮ ಶಾಲೆಗಳಲ್ಲಿ ಕೆರೆಕೋಣ ಶಾಲೆಯೂ ಒಂದು ಎಂದರು.

300x250 AD

ಜಿಲ್ಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಸುಧೀಶ ನಾಯ್ಕ ಮಾತನಾಡಿ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿ ಇರಬೇಕಾದರೆ ಪಾಲಕರ ಮತ್ತು ಸಮುದಾಯದ ಸಹಕಾರ ತುಂಬಾ ಅಗತ್ಯ ಎಂದರು. ಯಾವುದೇ ಕಾರ್ಯಕ್ರಮವನ್ನಾದರೂ ಅತ್ಯುತ್ತಮವಾಗಿ ಸಂಘಟಿಸುವ ಕೆಲಸ ಕೆರೆಕೋಣ ಶಾಲೆಯಲ್ಲಿ ಎದ್ದು ಕಾಣುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಚಿನ್ ನಾಯ್ಕ ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯ ಮಲ್ಲಿಕಾ ಗೊಂಡ ಮಾತನಾಡಿ ಪಾಲಕರ ಬಾಲಕರ ಶಿಕ್ಷಕರ ತ್ರಿವೇಣಿ ಸಂಗಮವೇ ವಾರ್ಷಿಕೋತ್ಸವ ಎಂದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ ಭಂಡಾರಿ ಮಾತನಾಡಿ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಕೋಣ ಶಾಲೆಯು ತಾಲೂಕಿನಲ್ಲಿಯೇ ಉತ್ತಮವಾದ ಶಾಲೆ ಎಂದು ಹೇಳಿ ಇನ್ನೂ ಉತ್ತಮಗೊಳಿಸಲು ದಾನಿಗಳ ಸಹಕಾರದ ಅವಶ್ಯಕತೆ ಇದೆ ಎಂದರು. ಎಸ್ ಡಿ ಎಂ ಸಿ ಅಧ್ಯಕ್ಷ ರಾಮ ಭಂಡಾರಿ ಮಾತನಾಡಿ ಒಂದು ಕೈಯಿಂದ ಹೇಗೆ ಚಪ್ಪಾಳೆ ಆಗುವುದಿಲ್ಲವೋ ಅಂತೆಯೇ ಇಲ್ಲಿನ ಸದೃಢ ಎಸ್.ಡಿ.ಎಂ.ಸಿ. ಇನ್ನೊಂದು ಕೈಯಾಗಿ ಶಿಕ್ಷಕ ವೃಂದಕ್ಕೆ ಜೊತೆ ಜೊತೆಯಾಗಿ ನಿಲ್ಲುತ್ತದೆ ಎಂದರು .
ವೇದಿಕೆಯ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಭಟ್ಟ, ಬಿ ಆರ್ ಪಿ ಸತೀಶ್ ನಾಯ್ಕ, ಸಿ ಆರ್ ಪಿ ವೀಣಾ ಭಂಡಾರಿ ಉಪಸ್ಥಿತರಿದ್ದರು. ಶಾಲೆಯ ವರದಿ ವಾಚನವನ್ನು ಶಿಕ್ಷಕಿ ಗಾಯತ್ರಿ ನಾಯ್ಕ ಮಾಡಿದರು.
ಇತ್ತೀಚಿಗೆ ನಿಧನರಾದ ದಿವಂಗತ ಆರ್ ಎಸ್ ಭಟ್ ನವಿಲಗೋಣ, ನಿವೃತ್ತ ಶಿಕ್ಷಕ ಬಿ.ವಿ. ಭಂಡಾರಿ ಕೆರೆಕೋಣ, ಶಾಂತಪ್ಪ ಮೊಗೇರ, ತಿಮ್ಮಣ್ಣ ಮೊಗೇರ ಅಕ್ಕನಗದ್ದೆ, ಗಣೇಶ ಹೆಗಡೆ ಬೀನಗೋಡ, ಲಕ್ಷ್ಮಿ ವಿಷ್ಣು ಭಟ್ಟ ಬೋಳಗೆರೆ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಖ್ಯಾಧ್ಯಾಪಕ ಗಣೇಶ ಭಾಗವತ ಸ್ವಾಗತಿಸಿದರು, ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಕೇಶವ ಶೆಟ್ಟಿ ವಂದಿಸಿದರು ಶಿಕ್ಷಕ ಸಂದೀಪ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಇದನ್ನು ಶಿಕ್ಷಕಿ ಲಲಿತಾ ಹೆಗಡೆ ನಿರ್ವಹಿಸಿದರು. ನಂತರ ಹಳೆ ವಿದ್ಯಾರ್ಥಿಗಳ ಕಲಾಬಳಗದ ಭಾಸ್ಕರ್ ಭಂಡಾರಿ ನೇತೃತ್ವದಲ್ಲಿ ಪ್ರೀತಿಯೋ ಮೋಹವೋ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

Share This
300x250 AD
300x250 AD
300x250 AD
Back to top