ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನಲ್ಲಿ ವಾರ್ಷಿಕವಾಗಿ ನೀಡುವ ಶಿಷ್ಯವೇತನ ಹಾಗೂ ಸಜ್ಜನಿ ಪುರಸ್ಕಾರ ಸಮಾರಂಭವನ್ನು ಪುಣೆಯ ಟೆಕ್ ಮಹೇಂದ್ರ ಕಂಪನಿಯ ಉಪಾಧ್ಯಕ್ಷರಾದ ಶ್ರೀನಿವಾಸ ಕಬ್ಬೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಷ್ಯವೇತನದ ಸಂಪೂರ್ಣ ಲಾಭವನ್ನು ಪಡೆದುಕೊಂಡು ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಿ ಎಂದು, ಮುಂದೆ ನೀವು ಸಹ ಬೇರೆಯವರಿಗೆ ಉಪಕಾರ ಮಾಡುವ ಮೂಲಕ ಸಮಾಜದ ಋಣ ತೀರಿಸಿ ಎಂದು ಮಾರ್ಮಿಕವಾಗಿ ನುಡಿದರು.
ಶ್ರೀಮತಿ ದೀಪಾ ಶ್ರೀನಿವಾಸ ಕಬ್ಬೆ ಮಾತನಾಡಿ ಈ ರೀತಿಯಾದ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಕಲಿಕಾ ಮನೋಭಾವ ಉದ್ದೀಪನವಾಗಲು ಸಹಾಯಕ ಆಗಿ, ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ನುಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಮಾತನಾಡಿ, ಶಿಷ್ಯವೇತನ ಹಾಗೂ ಸಜ್ಜನಿ ಪುರಸ್ಕಾರದ ಕುರಿತು ದಿಕ್ಸೂಚಿ ಮಾತುಗಳನ್ನಾಡಿದರು. ಸುಮಾರು 15 ಲಕ್ಷ ರೂಪಾಯಿಗಳ ಶಿಷ್ಯವೇತನವನ್ನು ನೀಡಲಾಯಿತು. ಅದೇ ರೀತಿ 10 ವಿದ್ಯಾರ್ಥಿಗಳನ್ನು ಆಯ್ಕೆಯ ಮೂಲಕ ಸಜ್ಜನಿ ಪುರಸ್ಕಾರ ನೀಡಿ, ಭಾರತೀಯ ಸಂಸ್ಕೃತಿ ಪರಂಪರೆ ಮುಂದುವರಿಸಲು ಇದೊಂದು ಪುರಸ್ಕಾರ ಎಂದು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಆರ್. ಎಚ್. ದೇಶಭಂಡಾರಿ ಹಾಗೂ ಕೊಂಕಣ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸ್ಥಾಪಿತವಾದ ಆರ್ತನಿಧಿಯನ್ನು (ಸಹಾಯನಿಧಿ) ಸಂಸ್ಥೆಯ ಸಿಬ್ಬಂದಿಗಳಿಗೆ ಅನಾರೋಗ್ಯದ ನಿಮಿತ್ತ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ಆರ್. ನಾಯಕ ವಹಿಸಿ ಶಿಷ್ಯವೇತನ ಹಾಗೂ ಸಜ್ಜನಿ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಶುಭಕೋರಿ ಹಾರೈಸಿದರು. ವೇದಿಕೆಯಲ್ಲಿ ಟ್ರಸ್ಟಿಗಳಾದ ರಮೇಶ ಪ್ರಭು, ರಾಮಕೃಷ್ಣ ಗೋಳಿ, ಡಿ.ಡಿ.ಕಾಮತ್, ಆರ್. ಎಚ್. ದೇಶಭಂಡಾರಿ ಉಪಸ್ಥಿತರಿದ್ದರು. ಟ್ರಸ್ಟಿಗಳಾದ ಅನಂತ ಶಾನಭಾಗ ಸ್ವಾಗತಿಸಿದರು. ಮುಖ್ಯಾಧ್ಯಾಪಕರಾದ ಶ್ರೀಮತಿ ಸುಮಾ ಪ್ರಭುರವರು ಧನ್ಯವಾದ ಸಮರ್ಪಿಸಿದರು, ಶಿಕ್ಷಕರಾದ ಆದರ್ಶ ರೇವಣಕರ ಹಾಗೂ ಶ್ರೀಮತಿ ಅನಿತಾ ಪಟಗಾರ ನಿರೂಪಿಸಿದರೆ ಶ್ರೀಮತಿ ವಿನಯಾ ಶಾನಭಾಗರವರು ಸಹಕರಿಸಿದರು. ವಿದ್ಯಾರ್ಥಿಗಳಾದ ಸೃಜನಾ ಸಂಗಡಿಗರು ಪ್ರಾರ್ಥಿಸಿದರು.