ಹೊನ್ನಾವರ : ಕರ್ಕಿ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ವಿದ್ವಾಸಂಸ್ಥೆಯ ಪ್ರಥಮ ಸಂಸ್ಥಾಪಕರಾದ ದಿವಂಗತ ಜಿ.ಆರ್ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎಮ್. ಭಟ್ ಕಾಶಿ ನಿವೃತ್ತ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರು ಇವರು ಮಾತನಾಡಿ ತಾವು ಕಲಿತ ಈ ಶಾಲೆ ಮತ್ತು ಕಲಿಸಿದ ಗುರುಗಳನ್ನು ನೆನೆಯುತ್ತಾ ತಮ್ಮ ಬಾಲ್ಯದ ಕಠಿಣ ದಿನಗಳನ್ನ ನೆನಪಿಸಿಕೊಂಡರು. ಶಾಲೆ ಇನ್ನೂ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಹಾರೈಸಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಜೈ ಮಾರುತಿ ಇಂಡಸ್ಟ್ರಿ ಕರ್ಕಿಯ ಮಾಲಿಕರಾದ ಸತೀಶ ಪಿ. ಭಟ್ಟ ಮಾತನಾಡಿ ಗುರುಗಳಾದ ಎಲ್.ಎಮ್. ಹೆಗಡೆ ಸರ್ ಕಿವಿ ಹಿಂಡಿ ಹೇಳಿದ ಮಾತು ನಾನು ಏನಾದರು ಸಾಧಿಸಲು ಸ್ಪೂರ್ತಿಯಾಯಿತು ಎಂದು ನೆನಪಿಸಿಕೊಂಡರು ಮತ್ತು ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೂತನ ಶೌಚಾಲಯ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಗಜಾನನ ಹೆಗಡೆ ಮಾತನಾಡಿ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಮತ್ತು ಕ್ರೀಡಾಕೂಟದಂತಹ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿರುತ್ತಾರೆ. ಇಂತಹ ಮಕ್ಕಳನ್ನ ಹೆತ್ತ ಪೋಷಕರಿಗೆ ಧನ್ಯವಾದಗಳನ್ನ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎಮ್.ಭಟ್ ಕಾಶಿ, ಸತೀಶ್ ಪಿ. ಭಟ್ ಮತ್ತು ಅಕ್ಷರ ದಾಸೋಹದ ಕಾರ್ಯಕ್ರಮದ ಅಡಿಯಲ್ಲಿ ಅಡುಗೆದಾರರಾಗಿ 8 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಲಕ್ಷ್ಮಿ ನಾಗು ಮುಕ್ರಿ ಇವರನ್ನು ಸನ್ಮಾನಿಸಲಾಯಿತು. ಪ್ರತಿ ವರ್ಷದಂತೆ ಸೇತುಬಂಧ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಮಾಡುವ ಸಂದರ್ಭದಲ್ಲಿ ಟ್ರಸ್ಟನ ಹಿರಿಯ ಸದಸ್ಯರಾದ ಕೆ.ಎಸ್. ಭಟ್ ಇವರ ಸಮ್ಮುಖದಲ್ಲಿ ಪ್ರೋತ್ಸಾಹಿಸಲಾಯಿತು. ರಾಮಚಂದ್ರ ಜೋಶಿ ನಿವೃತ್ತ ಕೆ.ಡಿ.ಸಿ.ಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ಧೇಶಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಮೀನಾಕ್ಷಿ ಕಲ್ಯಾಣ” ಯಕ್ಷಗಾನದ ಸಂಪೂರ್ಣ ಪ್ರಾಯೋಜಕತ್ವವನ್ನ ವಹಿಸಿದರು. ದೀಪಕ್ ಶೇಟ ಮಹಾಲಕ್ಷ್ಮಿ ಜೂವೆಲರ‍್ಸ್ ಮಾಲೀಕರು ತಮ್ಮ ತಂದೆಯಾದ ದಿವಂಗತ ಚಂದ್ರಹಾಸ ಶೇಟ ಇವರ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೆರವು ನೀಡಿದರು.
ಮುಖ್ಯಾಧ್ಯಾಪಕರಾದ ಎಲ್. ಎಮ್. ಹೆಗಡೆ ಸ್ವಾಗತಿಸಿದರು, ವಿಶ್ವನಾಥ ನಾಯ್ಕ ಕ್ರೀಡಾ ಪಾರಿತೋಷಕ ವಿತರಣೆ ನಿರ್ವಹಿಸಿದರು, ಸೀಮಾ ಭಟ್ ರವರು ಪ್ರತಿಭಾ ಪುರಸ್ಕಾರದ ಯಾದಿಯನ್ನು ಪ್ರಸ್ತುತಪಡಿಸಿದರು, ಸುಬ್ರಹ್ಮಣ್ಯ ಭಟ್ ಶಾಲಾ ವರದಿಯನ್ನ ವಾಚಿಸಿದರು, ಮುಕ್ತಾ ನಾಯ್ಕ ಸರ್ವರನ್ನ ವಂದಿಸಿದರು. ಶ್ರೀಕಾಂತ್ ಹಿಟ್ನಳ್ಳಿ ಹಾಗೂ ಕವಿತಾ ನಾಯ್ಕ ಅವರು ಸಭಾ ಕಾರ್ಯಕ್ರಮವನ್ನ ನಿರೂಪಿಸಿದರು. ಹಾಗೂ ಶಾಲೆಯ ಪ್ರತಿಭಾನ್ವಿತ ಮಕ್ಕಳು ವಿನೂತನವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.