ಕಾರವಾರ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಹಾಗೂ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವ ಮೂಲಕ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುವು ಮಾಡುವಂತೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ರಾಷ್ಟ್ರೀಯ ಹೆದ್ದಾರಿಯ ಪ್ರಗತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟಿಯ ಹೆದ್ದಾರಿಯಲ್ಲಿ ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ಗುರುತಿಸಿರುವ ಅಪಘಾತ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯಲ್ಲಿ ಕೈಗೊಂಡು ಜೀವಹಾನಿಯಾಗುವುದನ್ನು ತಪ್ಪಿಸಬೇಕು. ಮಳೆ ಬಂದರೆ ಹೆದ್ದಾರಿ ಪಕ್ಕದ ಮನೆಗಳಿಗೆ ನೀರು ನುಗ್ಗುವ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಿ. ಅಗತ್ಯವಿರುವಡೆಗಳಲ್ಲಿ ಸರ್ವಿಸ್ ರಸ್ತೆ, ಬಸ್ ಶೆಲ್ಟರ್ ನಿರ್ಮಿಸುವಂತೆ ಸೂಚನೆ ನೀಡಿದರು.
ಜಿಲ್ಲಾಡಳಿದ ಮೂಲಕ ರಾಷ್ಟಿಯ ಹೆದ್ದಾರಿಯಲ್ಲಿ ನಡೆಯಬೇಕಾದ ತುರ್ತು ಕಾಮಗಾರಿಗಳ ಬಗ್ಗೆ ತಿಳಿಸಿದಾಗ ಈ ಬಗ್ಗೆ ತಕ್ಷಣ ಸ್ಪಂದಿಸಿ ಕಾಮಗಾರಿಗಳನ್ನು ಕೈಗೊಳ್ಳಿ, ಸಣ್ಣ ಪುಟ್ಟ ಕಾಮಗಾರಿಗಳಿಗೆ ತಮ್ಮ ಹಂತದಲ್ಲೇ ನಿರ್ಣಯ ಕೈಗೊಂಡು ಕಾಮಗಾರಿ ನಡೆಸಿ. ಇತರೇ ಕಾಮಗಾರಿಗಳಿಗೆ ಕೇಂದ್ರದ ನೆರವು ಬೇಕಿದ್ದಲ್ಲಿ ಈ ಬಗ್ಗೆ ತನ್ನ ಗಮನಕ್ಕೆ ತಂದಲ್ಲಿ ಕೇಂದ್ರದಿಂದ ಅಗತ್ಯ ಅನುಮೋದನೆ ಮತ್ತು ನೆರವು ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾeಪೂತ್, ರಾಷ್ಟಿಯ ಹೆದ್ದಾರಿಯ ಯೋಜನಾ ನಿರ್ದೇಶಕ ಹರಿಕೃಷ್ಣ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.