ಶಿರಸಿ: ‘ಸಂಗೀತ’ ಶಾಂತಿ ನೆಮ್ಮದಿಯ ಕೀಲಿಕೈ ಎಂದು ಶಾಂತಾರಾಮ ಹೆಗಡೆ ಸುಗಾವಿ ಹೇಳಿದರು.
ಇತ್ತೀಚೆಗೆ ನಗರದ ರಂಗಧಾಮದಲ್ಲಿ ಶ್ರೀ ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ನಾದೋಪಾಸನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಂತಾರಾಮ ಹೆಗಡೆ ಸುಗಾವಿ ದಂಪತಿಗಳು ಮಾತನಾಡುತ್ತಾ, ವಿದ್ಯಾರ್ಥಿಗಳ ಸಂಗೀತಾಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಬೇಕೆಂದು ಪಾಲಕರಲ್ಲಿ ವಿನಂತಿಸಿಕೊಂಡರು.
ಬೆಳಗಿನ ಅವಧಿಯಲ್ಲಿ ವಿದ್ಯಾಲಯದ ವಿದ್ಯಾರ್ಥಿನಿಯರಿಂದ ವಿವಿಧ ರಾಗಗಳಲ್ಲಿ ಸುಮಧುರ ಗಾಯನ ಪ್ರಸ್ತುತಿ ನಡೆಯಿತು. ಆಮಂತ್ರಿತ ಸಂಗೀತ ಕಲಾವಿದೆ ಶ್ರೀಮತಿ ವಿದುಷಿ ಸ್ಮಿತಾ ಹೆಗಡೆಯವರ ಹಳೆಯ ವಿದ್ಯಾರ್ಥಿನಿ ಕುಮಾರಿ ನೈದಿಲೆ ವಿ. ಹೆಗಡೆ ಇವರಿಂದ ಜೈಪುರ್ ಘರಾನಾದಲ್ಲಿ ಬಂದಿಶ್ ಹಾಗೂ ವಿವಿಧ ರಾಗಗಳಲ್ಲಿ ಭಕ್ತಿಗೀತೆಗಳು ಅತ್ಯಂತ ಸುಂದರವಾಗಿ ಮೂಡಿಬಂದವು.
ನಂತರ ಸಂಗೀತ ಶಾಲೆಯ ಶಿಕ್ಷಕಿ ವಿದುಷಿ ಶ್ರೀಮತಿ ಸ್ಮಿತಾ ಹೆಗಡೆ ಕುಂಟೆಮನೆ ಆರಂಭದಲ್ಲಿ ಜೋಗ್ ರಾಗ ಪ್ರಸ್ತುತಪಡಿಸುತ್ತಾ, ನಂತರದಲ್ಲಿ ವಿವಿಧ ರಾಗಗಳಲ್ಲಿ ಭಕ್ತಿಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು.
ಸಂವಾದಿನಿಯಲ್ಲಿ ಕುಮಾರಿ ಅಂಜನಾ ಹೆಗಡೆ, ಕುಮಾರಿ ಗೀತಾ ಜೋಶಿ, ಶ್ರೀಮತಿ ಶೈಲಜಾ ಮತ್ತಿಘಟ್ಟ, ಅಜಯ್ ಹೆಗಡೆ ಸಹಕರಿಸಿದರೆ, ಕುಮಾರ್ ಚಿನ್ಮಯ್, ಕುಮಾರ್ ಕೈವಲ್ಯ, ಯಲ್ಲಪ್ಪ ಹಾಗೂ ಮಂಜುನಾಥ ಮೋಟಿನ್ಸರ ಇವರು ತಬಲದಲ್ಲಿ ಸಹಕರಿಸಿದರು.
ಆರಂಭದಲ್ಲಿ ಶ್ರೀಮತಿ ಸುನೈನ ಹೆಗಡೆ ಸ್ವಾಗತಿಸಿದರೆ, ಶ್ರೀಮತಿ ಜಾನಕಿ ಹೆಗಡೆ ವಂದಿಸಿದರು. ಪಾಲಕ, ಪೋಷಕರು ಹಾಗೂ ಸಾರ್ವಜನಿಕರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಗೀತ ಕಾರ್ಯಕ್ರಮ ಆಸ್ವಾದಿಸಿದರು.