ಸಿದ್ಧಾಪುರ: ಅರಣ್ಯವಾಸಿಗಳ ಸಾಗುವಳಿ ಭೂಮಿಗೆ ಸಂಬಂಧಿಸಿ ಹಾಗೂ ಅರಣ್ಯವಾಸಿಯ ಹಿತ ಕಾಪಾಡುವ ದೃಷ್ಟಿಯಿಂದ ಅರಣ್ಯವಾಸಿಗಳ ಕಾವಲು ಪಡೆ ರಚಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ನಿರ್ಧರಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಬುಧವಾರ ಸಿದ್ದಾಪುರ ತಾಲೂಕಿನ, ಬಾಲಭವನದಲ್ಲಿ ಅರಣ್ಯ ಅತಿಕ್ರಮಣದಾರರ ಸಭೆಯ ನಂತರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮೇಲಿನಂತೆ ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರಿಗೆ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ, ಕಿರುಕುಳ, ಅರಣ್ಯ ಭೂಮಿ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕ್ಷೇತ್ರಕ್ಕೆ ಸಂಬಂಧಿಸಿ ಸಮಸ್ಯೆ ಉಂಟಾದಾಗ ಅಂತಹ ಅರಣ್ಯವಾಸಿಗಳು ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೋರಾಟಗಾರರ ವೇದಿಕೆಯ ಕಾರ್ಯಾಲಯ ವಾಟ್ಸ್ಆಪ್ ನಂಬರ್‌ಗೆ ಮಾಹಿತಿ ನೀಡತಕ್ಕದ್ದು. ಇಂತಹ ಪ್ರಕರಣಕ್ಕೆ ಹೋರಾಟಗಾರರ ವೇದಿಕೆಯು ಸ್ಪಂದಿಸುವುದೆಂದು ಅವರು ಹೇಳಿದರು.
ಕಳೆದ 33 ವರ್ಷದಿಂದ ನಿರಂತರವಾಗಿ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಜರುಗಿಸುತ್ತಿದ್ದು, ಹೋರಾಟ ನಿರಂತರವಾಗಿರುತ್ತದೆ ವಿನಃ ಪಕ್ಷಾಧಾರಿತವಾಗಿರುವುದಿಲ್ಲ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕಾ ಅಧ್ಯಕ್ಷರಾದ ಶಿವಾನಂದ ಜೋಗಿ ಮುಂಡಗೋಡ, ಭೀಮ್ಸಿ ವಾಲ್ಮಿಕಿ ಯಲ್ಲಾಪುರ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಮಂಜುನಾಥ ಮಡಿವಾಳ ಹಾರ್ಸಿಕಟ್ಟಾ, ಸುನಿಲ್ ನಾಯ್ಕ ಸಂಪಖಂಡ, ವಿಜಯ ನಾಯ್ಕ ಕಾನಗೋಡ, ದಿನೇಶ್ ನಾಯ್ಕ ಬೇಡ್ಕಣಿ, ಬಾಲಕೃಷ್ಣ ನಾಯ್ಕ ಕೋಲ್ಸಿರ್ಸಿ, ರಾಘವೇಂದ್ರ ಕವಂಚೂರು, ಇಸ್ಮಾಯಿಲ್ ಶೇಖ್ ಹೆರೂರ್, ಮಾದೇವಿ ನಾಯ್ಕ, ಜೈವಂತ ಕಾನಗೋಡ, ಎಮ್ ಆರ್ ನಾಯ್ಕ ಬೇಡ್ಕಣಿ, ವಿಜಯ ನಿಡಗೋಡ, ರವಿ ನಾಯ್ಕ ಹಂಜಗಿ, ರುಕ್ಮಿಣಿ ಈಶ್ವರ ನಾಯ್ಕ, ನೇತ್ರಾವತಿ ದಿನಕರ ಬಾಂಧಿ, ನೆಹರೂ ನಾಯ್ಕ ಬಿಳೂರು, ಎಮ್.ಆರ್.ನಾಯ್ಕ ಕಂಡ್ರಾಜಿ ಮುಂತಾದವರು ಉಪಸ್ಥಿತರಿದ್ದರು.
ಗಲಭೆ, ದೊಂಭಿ ರಹಿತ ಹೋರಾಟ:
ಅರಣ್ಯ ಭೂಮಿ ಹೋರಾಟದ 33 ವರ್ಷದ ಇತಿಹಾಸದಲ್ಲಿ ಕಾನೂನು ಬಾಹಿರ ಕೃತ್ಯವನ್ನಾಗಲೀ, ಅರಣ್ಯವಾಸಿಗಳಿಗೆ ಉತ್ತೇಜಿಸಿ ಗಲಭೆ, ದೊಂಬೆ ರಹಿತ ಹೋರಾಟ ಇತಿಹಾಸದಲ್ಲಿ ಚಾರಿತ್ರಿಕ ಅಂಶವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ನಿರಂತರವಾಗಿ ಹೋರಾಟ:
ಅರಣ್ಯ ಭೂಮಿ ಹಕ್ಕಿನ ಹೋರಾಟ ಜಾತಿ, ಮತ, ಧರ್ಮ, ಪಕ್ಷ, ಬೇಧ-ಭಾವ ಆಧಾರಿತವಲ್ಲ. ಅರಣ್ಯವಾಸಿಗಳ ಸಮಸ್ಯೆಗೆ ಅರಣ್ಯ ಭೂಮಿ ಹಕ್ಕು ನೀಡುವುದೇ ಮೂಲಭೂತ ಉದ್ದೇಶ.