ಸಿದ್ದಾಪುರ: ತಾಳಗುಪ್ಪದಿಂದ ಖಾನಾಪುರದವರೆಗೆ ಹೊಸ ರೇಲ್ವೇ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿರುವದು ಸಂತಸದ ಸಂಗತಿ. ಆದರೆ ತಾಲೂಕಿನಲ್ಲಿ ಅನಾದಿಕಾಲದಿಂದ ಅರಣ್ಯ ಅತಿಕ್ರಮಣ ಮಾಡಿಕೊಂಡ ಅನೇಕ ಚಿಕ್ಕ ಹಿಡುವಳಿದಾರ ರೈತರು ತಮ್ಮ ಜಮೀನು, ಮನೆಗಳನ್ನು ಕಳೆದುಕೊಳ್ಳುವ ಸಂದರ್ಭ ಬಂದಿದ್ದು, ಅವರಿಗೆ ಯೋಗ್ಯ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಮುಖಂಡ ವೀರಭದ್ರ ನಾಯ್ಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿಯ ಮೂಲಕ ಕೋರಿದ್ದಾರೆ.
ಅವರು ಪಟ್ಟಣದ ಆಡಳಿತ ಸೌಧದಲ್ಲಿ ಈ ಮನವಿಯನ್ನು ತಹಶೀಲ್ದಾರರಿಗೆ ನೀಡಿ ಮಾತನಾಡಿ, ತಾಳಗುಪ್ಪದಿಂದ ಶಿರಸಿ ಮಾರ್ಗವಾಗಿ ಹಾದುಹೋಗುವ ರೇಲ್ವೇ ಮಾರ್ಗದ ನೀಲನಕ್ಷೆ ಸಿದ್ಧವಾಗಿದ್ದು ಸದ್ಯದಲ್ಲೇ ನಿರ್ಮಾಣಕಾರ್ಯ ಆರಂಭಗೊಳ್ಳಲಿದೆ. ಕಳೆದ ನೂರಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ರೈತರು ಜಮೀನು ಕೃಷಿ ಮಾಡುತ್ತ ಬಂದಿದ್ದಾರೆ. ಬಹಳಷ್ಟು ರೈತರು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತ, ವಾಸಕ್ಕೆ ಮನೆಯನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ. ಆ ಜಮೀನಿನ ಉತ್ಪನ್ನವೇ ಈ ರೈತರಿಗೆ ಅವಲಂಬನೆಯಾಗಿದೆ. ರೇಲ್ವೇ ಮಾರ್ಗ ಹಾದುಹೋಗುವಲ್ಲಿ ತಾಲೂಕಿನ ಬಹಳಷ್ಟು ರೈತರು ಭೂಮಿ, ಮನೆ ಕಳೆದುಕೊಳ್ಳಲಿದ್ದು ಅವರಿಗೆ ಘನ ಸರಕಾರ ಬೇರೆಡೆ ಬದುಕು ಕಟ್ಟಿಕೊಳ್ಳಲು ಜಾಗ ಮಂಜೂರಿ, ಆಸ್ತಿ ಕಳೆದುಕೊಳ್ಳಲಿರುವ ರೈತರಿಗೆ ಸಮರ್ಪಕ, ಯೋಗ್ಯ ಪರಿಹಾರವನ್ನು ನೀಡುವಲ್ಲಿ ರೈತರ ಪರ ಕಾಳಜಿ ಹೊಂದಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಾಗಬೇಕು ಎಂದರು. ಈ ಮನವಿಯನ್ನು ಪ್ರಧಾನಮಂತ್ರಿಯವರಿಗೆ ಕಳಿಸಿಕೊಡುವಂತೆ ಕೋರಿಕೊಂಡರು.
ತಹಶೀಲ್ದಾರ ಎಂ.ಆರ್.ಕುಲಕರ್ಣಿ ಮನವಿ ಸ್ವೀಕರಿಸಿದರು. ರೈತಸಂಘಟನೆಯ ರಾಘವೇಂದ್ರ ನಾಯ್ಕ ಕವಂಚೂರು, ವಿನಾಯಕ ಹಲಗೇರಿ, ವಿಠ್ಠಲ ಅವರಗುಪ್ಪ, ಅನಂತ ಕವಂಚೂರ, ಗೋವಿಂದ ಶೇಟ್,ರವೂಪ್ ಸಾಬ್ ಹೇರೂರು, ರವಿ ದೊಡ್ಮನೆ, ರಾಜಕುಮಾರ ನಾಯ್ಕ ಕಾರ್ಗಲ್ ಮುಂತಾದವರಿದ್ದರು.