ಹೊನ್ನಾವರ: ತಾಲೂಕಿನ ಕಡ್ಲೆಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹಸಮ್ಮೇಳನವನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು.
ಶಾಲಾ ವಾರ್ಷಿಕೋತ್ಸವವು ವಿದ್ಯಾರ್ಥಿಗಳಿಗೆ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಪಾಲಕರು ಹಾಗೂ ಗ್ರಾಮಸ್ಥರು ತಮ್ಮ ಶಾಲೆಯ ಮಕ್ಕಳು ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಲು ಉತ್ಸುಕರಾಗಿರುತ್ತಾರೆ. ಕಡ್ಲೆಕೊಪ್ಪ ಎನ್ನುವುದು ಪಟ್ಟಣದಿಂದ ಬಹಳ ದೂರದಲ್ಲಿ ಇರುವ ಪುಟ್ಟ ಹಳ್ಳಿಯಾಗಿದೆ. ಆದರೆ ಇಲ್ಲಿ ಶಾಲಾ ಕಾರ್ಯಕ್ರಮವನ್ನು ಸಂಘಟಿಸಿರುವ ರೀತಿಯನ್ನು ಗಮನಿಸಿದರೆ ಕಡ್ಲೆಕೊಪ್ಪ ಶಾಲೆಯು ಯಾವುದೇ ಪಟ್ಟಣದ ಶಾಲೆಗೆ ಕಡಿಮೆಯಿಲ್ಲ ಎನ್ನುವುದು ತಿಳಿಯುತ್ತದೆ. ಶಿಕ್ಷಕರಿಂದ ಹಾಗೂ ಪಾಲಕರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿರುವುದರಿಂದ ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಮಕ್ಕಳು ಹತ್ತನೇ ತರಗತಿಯಲ್ಲಿ ಹಾಗೂ ಉನ್ನತ ವ್ಯಾಸಂಗದಲ್ಲಿ ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕುಮಟಾ ಹಾಗೂ ಹೊನ್ನಾವರದಲ್ಲಿ ಅತ್ಯುತ್ತಮವಾದ ಕಾಲೇಜು ನಿರ್ಮಾಣ ಮಾಡಿರುವ ತೃಪ್ತಿ ನನಗೆ ಇದೆ. ಎಲ್ಲ ಶಾಲೆಗಳ ಕುಂದುಕೊರತೆಗಳನ್ನು ನಿವಾರಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಕಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಸ್. ನಾಯ್ಕ್, ಡಯಟ್ ನ ಉಪಪ್ರಾಂಶುಪಾಲ ಜಿ. ಎಸ್. ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಊರ್ಮಿಳಾ ಶೇಟ್ ಮತ್ತು ಗಜಾನನ ಮಡಿವಾಳ, ಪ್ರಾ. ಶಾ. ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಮ್. ಜಿ. ನಾಯ್ಕ್, ಮುಖ್ಯ ಶಿಕ್ಷಕ ಜನಾರ್ಧನ ನಾಯ್ಕ್, ಸಿ. ಆರ್. ಪಿ. ಈಶ್ವರ ಭಟ್, ಎಸ್. ಡಿ. ಎಮ್. ಸಿ. ಅಧ್ಯಕ್ಷ ರಾಮಕೃಷ್ಣ ಗೌಡ ಉಪಾಧ್ಯಕ್ಷೆ ಭಾರತಿ ಭಟ್, ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿ ಹೆಗಡೆ ಹಾಗೂ ಇತರರು ಇದ್ದರು.