ಹೊನ್ನಾವರ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ 907ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ಕರ್ನಾಟಕ ಸರ್ಕಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿ. ಪಂ. ಉತ್ತರಕನ್ನಡ ಹಾಗೂ ಗ್ರಾ. ಪಂ. ಮುಗ್ವಾ ಇವರ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 2.49ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿ ಇದಾಗಿದೆ.
ಗುದ್ದಲಿ ಪೂಜೆಯನ್ನು ನೆರವೇರಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಬಡವರಿಗೆ ಮೂಲಭೂತ ಸೌಕರ್ಯಗಳ ಸೃಷ್ಟಿಯಲ್ಲಿ ನರೇಂದ್ರ ಮೋದೀಜಿಯವರು ವಿಶೇಷ ಸಾಧನೆ ಮಾಡಿದ್ದಾರೆ. ಅದರಲ್ಲಿ ಜಲಜೀವನ್ ಮಿಷನ್ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆ ಜಾರಿಗೆಬಂದ ನಂತರ ದೇಶದಾದ್ಯಂತ 50ಪ್ರತಿಶತ ಮನೆಗಳಿಗೆ ನಲ್ಲಿನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ 70.12ಲಕ್ಷ ನಲ್ಲಿನೀರಿನ ಸಂಪರ್ಕಗಳು ಜನರಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುತ್ತಿದೆ. ಅಂತೆಯೇ ಮುಗ್ವಾ ಗ್ರಾಮದ 907ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಗಿದ್ದು ಈ ಯೋಜನೆಯ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು. ಕಾಮಗಾರಿಯಲ್ಲಿ ಲೋಪದೋಷಗಳು ಕಂಡುಬಂದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮುಗ್ವಾ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಕನಸಾಗಿತ್ತು. ಮೋದೀಜಿಯವರ ಜಲಜೀವನ್ ಮಿಷನ್ ಯೋಜನೆಯಿಂದ ಆ ಕನಸು ಇಂದು ನನಸಾಗುತ್ತಿದೆ ಎಂದು ಹೇಳಿದರು.
ಮುಗ್ವಾ ಗ್ರಾಮಪಂಚಾಯತ್ ಅಧ್ಯಕ್ಷ ಐ. ವಿ ನಾಯ್ಕ, ಉಪಾಧ್ಯಕ್ಷೆ ವಿದ್ಯಾ ಮೇಸ್ತ, ಸದಸ್ಯರುಗಳಾದ ಗೋವಿಂದ ಭಭಟ್ಟ , ರಾಮ ಗೌಡ, ಪರಮೇಶ್ವರಿ ಮುಕ್ರಿ, ಉಮೇಶ ನಾಯ್ಕ, ಆಶಾ ನಾರಾಯಣ ಹೆಗಡೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ, ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಪ್ರಮುಖರಾದ ಎಮ್. ಎಸ್. ಹೆಗಡೆ ಕಣ್ಣಿ, ನಾರಾಯಣ ಹೆಗಡೆ, ಪೂರ್ಣಿಮಾ ಮಡಿವಾಳ, ಜಯಾ ಮಡಿವಾಳ, ರೋಷನ್ ಶಾನಭಾಗ, ಗಿರೀಶ್ ಶಾನಭಾಗ, ರಾಘು ಶೆಟ್ಟಿ, ಎನ್. ಎಸ್. ಭಂಡಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಇತರರು ಹಾಜರಿದ್ದರು.